ಬೆಂಗಳೂರು: ಏರ್ಪೋಟ್ ರಸ್ತೆಯಲ್ಲಿ ಯುವಕ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಫ್ಲೈ ಓವರ್ ಮೇಲಿಂದ ಬಿದ್ದು ಯುವಕ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮಾಲ್ ಆಫ್ ಏಷ್ಯಾ ಮುಂಭಾಗದ ರಸ್ತೆಯಲ್ಲಿ ಯುವಕನ ಶವ ಪತ್ತೆಯಾಗಿದೆ. ತಡರಾತ್ರಿ 12:30 ರ ವೇಳೆಗೆ ಸುಮಾರಿಗೆ ಈ ಘಟನೆ ನಡೆದಿದೆ. ಏರ್ಪೋಟ್ ರಸ್ತೆ ಫ್ಲೈಓವರ್ ಕೆಳಭಾಗದ ರಸ್ತೆಯಲ್ಲಿ ಯುವಕನ ಶವ ಬಿದ್ದಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆದರೆ, ಫ್ಲೈ ಓವರ್ ಮೇಲೆ ಅಪರಿಚಿತ ಬೈಕ್ ಕೂಡ ಪತ್ತೆಯಾಗಿದೆ. ಬೈಕ್ ನಲ್ಲಿ ಬಂದು, ಬೈಕ್ ನಿಲ್ಲಿಸಿ ಬಳಿಕ ಕೆಳಗೆ ಬಿದ್ದಿರುವ ಶಂಕೆ ಕೂಡ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಡೀಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.