ಬೆಂಗಳೂರು: ಆಪರೇಷನ್ ಕಮಲದ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯೇ ಸಾಕ್ಷಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಹಿಂದೆ ಸರ್ಕಾರ ಪತನ ಮಾಡಲು 1000 ಕೋಟಿ ರೂ. ಸಂಗ್ರಹ ಮಾಡಲಾಗಿದೆ ಎಂದು ಆರೋಪಿಸಿದ್ದರು. ಯತ್ನಾಳ್ ಹೇಳಿಕೆಗೆ ಅವರು ಸಾಕ್ಷಿ ಕೊಡಲಿ. ಆನಂತರ ಆಪರೇಷನ್ ಕಮಲದ ಬಗ್ಗೆ ನಾವು ಸಾಕ್ಷಿ ನೀಡುತ್ತೇವೆ ಎಂದಿದ್ದಾರೆ.
“ಶಾಸಕರ ಖರೀದಿ ಬಗ್ಗೆ ತನಿಖೆ ಮಾಡಿ. ಖರೀದಿ ಮಾಡಲು ಶಾಸಕರು ಕುರಿಗಳೇ ಎಂದು ಬಿಜೆಪಿ ಕೇಳುತ್ತಿದೆ. ಆದರೆ, ಹಿಂದೆ ಖರೀದಿಸಿದವರು ಕುರಿಗಳಾ? ದನ ಕುರಿಗಳನ್ನು ಖರೀದಿ ಮಾಡಿದಂತೆ ಶಾಸಕರನ್ನು ಖರೀದಿ ಮಾಡಿದ್ದಿರಲ್ಲವೇ ಎಂದು ತಿರುಗೇಟು ನೀಡಿದ್ದಾರೆ.
ದೇಶದಲ್ಲಿ ಎಲ್ಲಾ ಪದಾರ್ಥಗಳ ಬೆಲೆ ಏರಿಕೆಯಾಗಿದೆ ಎಂದು ಬಿಜೆಪಿಗೆ ಅರ್ಥವಾಗಿರುವ ಕಾರಣಕ್ಕೆ ಅವರೂ ಸಹ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದು, ಕರ್ನಾಟಕ ಮಾದರಿಯನ್ನು ಹಿಂಬಾಲಿಸುತ್ತಿದ್ದಾರೆ. ಅದಕ್ಕೆ ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ 1,500 ರೂಪಾಯಿ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಮಾತುಗಳನ್ನು ಮಾಧ್ಯಮಗಳು ತೋರಿಸುತ್ತಿಲ್ಲ. ಬರೀ ಬಿಜೆಪಿಯವರ ಮಾತುಗಳನ್ನು ತೋರಿಸಲಾಗುತ್ತಿದೆ. ಇದು ದೊಡ್ಡ ಗೊಂದಲಕ್ಕೆ ಕಾರಣವಾಗಿದೆ ಎಂದಿದ್ದಾರೆ.