ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ-2025’ರಲ್ಲಿ ಭಾರತವು 180ರಲ್ಲಿ 151ನೇ ಸ್ಥಾನ ಪಡೆದಿದೆ. 2024ರಲ್ಲಿ 159ನೇ ಸ್ಥಾನ ಪಡೆದಿತ್ತು.
ಪ್ರಜಾಪ್ರಭುತ್ವ ಆಡಳಿತಕ್ಕಾಗಿ ಕೆಲಸ ಮಾಡುವ ಅಂತಾರಾಷ್ಟ್ರೀಯ ಲಾಭರಹಿತ ಸಂಸ್ಥೆಯಾದ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್ಡಬ್ಲ್ಯುಬಿ) ಪ್ರಕಟಿಸಿದ ವರದಿಯಲ್ಲಿ ವಿಶ್ವದಾದ್ಯಂತ ಹೆಚ್ಚಿನ ಮಾಧ್ಯಮಗಳಿಗೆ ‘ಆರ್ಥಿಕ ಒತ್ತಡ’ ಪ್ರಮುಖ ಸಮಸ್ಯೆಯಾಗಿ ಹೇಳಲಾಗಿದೆ.
ಭಾರತ 2024ರಲ್ಲಿ 159ನೇ ಸ್ಥಾನ ಮತ್ತು 2023ರಲ್ಲಿ 161ನೇ ಸ್ಥಾನ ಪಡೆದಿತ್ತು. ಈ ಬಾರಿ 151ನೇ ಸ್ಥಾನ ಪಡೆಯುವ ಮೂಲಕ ಕೊಂಚ ಸುಧಾರಿಸಿದೆ. ಆದಾಗ್ಯೂ, ಭಾರತದ ಪತ್ರಿಕಾ ಸ್ವಾತಂತ್ರ್ಯ ‘ಅತ್ಯಂತ ಗಂಭೀರ’ ಪರಿಸ್ಥಿತಿಯಲ್ಲಿಯೇ ಇದೆ ಎಂದು ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಹೇಳಿದೆ.
ರಾಜಕೀಯ ಪ್ರಭಾವಿಗಳ ಕೈಯಲ್ಲಿ ಮಾಧ್ಯಮಗಳ ಮಾಲೀಕತ್ವದ ಕೇಂದ್ರೀಕರಣವು ಮಾಧ್ಯಮ ಬಹುತ್ವಕ್ಕೆ ಸವಾಲಾಗಿರುವ ದೇಶಗಳಲ್ಲಿ ಭಾರತವೂ ಸೇರಿದೆ” ಎಂದು ವರದಿ ತಿಳಿಸಿದೆ.
ಅದಲ್ಲದೆ, ವರದಿಯು ಜಾಗತಿಕ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿಯನ್ನು ಮೊದಲ ಬಾರಿಗೆ ‘ಕಠಿಣ ಪರಿಸ್ಥಿತಿ’ಯಲ್ಲಿದೆ ಎಂದಿದೆ. ಮಾಧ್ಯಮ ದುರ್ಬಲಗೊಳ್ಳಲು ಕಾರಣವಾದ ಪ್ರಮುಖ ಅಂಶವೆಂದರೆ ‘ಆರ್ಥಿಕ ಒತ್ತಡ’ ಎಂದು ಹೇಳಿದೆ.
ಸೂಚ್ಯಂಕದಲ್ಲಿ ನೆರೆಯ ರಾಷ್ಟ್ರಗಳಲ್ಲಿ ನೇಪಾಳ (90ನೇ ಸ್ಥಾನ), ಮಾಲ್ಡೀವ್ಸ್ (104ನೇ ಸ್ಥಾನ), ಶ್ರೀಲಂಕಾ (139ನೇ ಸ್ಥಾನ), ಬಾಂಗ್ಲಾದೇಶ (149ನೇ ಸ್ಥಾನ)ಕ್ಕಿಂತ ಭಾರತ ಹಿಂದೆ ಇದ್ದರೆ, ಭೂತಾನ್ (152ನೇ ಸ್ಥಾನ), ಪಾಕಿಸ್ತಾನ (158ನೇ ಸ್ಥಾನ), ಮ್ಯಾನ್ಮಾರ್ (169 ನೇ ಸ್ಥಾನ), ಅಫ್ಘಾನಿಸ್ತಾನ (175ನೇ ಸ್ಥಾನ) ಮತ್ತು ಚೀನಾ (178ನೇ ಸ್ಥಾನ) ಕ್ಕಿಂತ ಉತ್ತಮ ಸ್ಥಾನದಲ್ಲಿದೆ. ನಾರ್ವೆ, ಎಸ್ಟೋನಿಯಾ ಮತ್ತು ನೆದರ್ಲ್ಯಾಂಡ್ಸ್ ಮೊದಲ ಮೂರು ಸ್ಥಾನಗಳನ್ನು ಪಡೆದಿದೆ.