ದ್ವಾರಕಾ (ಉತ್ತರ ಪ್ರದೇಶ) , ಜುಲೈ 19, 2025: ದೆಹಲಿಯಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಪ್ರೇಮದ ಕರಾಳ ಮುಖವನ್ನು ಅನಾವರಣಗೊಳಿಸಿದೆ. ಕೇವಲ ಆಸ್ತಿ ಮತ್ತು ಅನೈತಿಕ ಸಂಬಂಧಕ್ಕಾಗಿ 35 ವರ್ಷದ ಪತಿಯೊಬ್ಬನನ್ನು ಆತನ ಪತ್ನಿ ಮತ್ತು ಸ್ವತಃ ಆಕೆಯ ಅಕ್ಕನ ಗಂಡ (ಭಾವ) ಸೇರಿಕೊಂಡು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಅಮಾನುಷ ಕೃತ್ಯದ ಹಿಂದಿನ ಸಂಚು, ಮೃತ ವ್ಯಕ್ತಿಯ ಸಹೋದರನಿಗೆ ಸಿಕ್ಕಿದ ವಾಟ್ಸ್‌ಆ್ಯಪ್ ಚಾಟ್‌ಗಳಿಂದ ಬಯಲಾಗಿದ್ದು, ಇಡೀ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ.
ಜುಲೈ 13ರಂದು ದೆಹಲಿಯ ದ್ವಾರಕಾದಲ್ಲಿ ಕರಣ್ ದೇವ್ (35) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಪತ್ನಿ ಸುಶ್ಮಿತಾ ದೇವ್ ಅವರು ಕರಣ್‌ಗೆ ವಿದ್ಯುತ್ ಆಘಾತವಾಗಿ ಪ್ರಜ್ಞೆ ತಪ್ಪಿದೆ ಎಂದು ಕುಟುಂಬಕ್ಕೆ ತಿಳಿಸಿ, ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ವೈದ್ಯರು ಕರಣ್ ಮೃತಪಟ್ಟಿರುವುದಾಗಿ ಘೋಷಿಸುತ್ತಿದ್ದಂತೆ ಅನುಮಾನದ ಹುತ್ತ ಬೆಳೆಯಿತು.
ಪೊಲೀಸರು ಮರಣೋತ್ತರ ಪರೀಕ್ಷೆಗೆ ದೇಹವನ್ನು ಕಳುಹಿಸಲು ಮುಂದಾದಾಗ, ಸುಶ್ಮಿತಾ, ಆಕೆಯ ಪ್ರೇಮಿ ರಾಹುಲ್ ದೇವ್ (ಕರಣ್ ಅವರ ಭಾವ) ಮತ್ತು ರಾಹುಲ್‌ನ ತಂದೆ ಮರಣೋತ್ತರ ಪರೀಕ್ಷೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಅವರ ಈ ವಿಚಿತ್ರ ನಡೆ ಕುಟುಂಬ ಸದಸ್ಯರ ಸಂಶಯವನ್ನು ಮತ್ತಷ್ಟು ಗಟ್ಟಿಗೊಳಿಸಿತು.
ವಾಟ್ಸ್‌ಆ್ಯಪ್ ಚಾಟ್‌ಗಳಲ್ಲಿ ಕೊಲೆ ಸಂಚಿನ ಬರ್ಬರ ವಿವರ!
ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಕರಣ್‌ನ ಕಿರಿಯ ಸಹೋದರ ಕುನಾಲ್‌ನಿಂದ. ಕುನಾಲ್, ಸುಶ್ಮಿತಾಳ ಮೊಬೈಲ್‌ನಲ್ಲಿ ಆಘಾತಕಾರಿ ವಾಟ್ಸ್‌ಆ್ಯಪ್ ಚಾಟ್‌ಗಳನ್ನು ನೋಡಿದ್ದ . ಈ ಚಾಟ್‌ಗಳಲ್ಲಿ ಸುಶ್ಮಿತಾ ಮತ್ತು ರಾಹುಲ್ ನಡುವಿನ ಅಕ್ರಮ ಸಂಬಂಧ ಮತ್ತು ಕರಣ್‌ನನ್ನು ಕೊಲ್ಲಲು ಹೆಣೆದಿದ್ದ ಭೀಕರ ಸಂಚಿನ ವಿವರಗಳು ದಾಖಲಾಗಿದ್ದವು. ಕರಣ್‌ಗೆ ಮಾದಕ ವಸ್ತುಗಳನ್ನು ನೀಡಿ, ನಂತರ ವಿದ್ಯುತ್ ಆಘಾತ ನೀಡಿ ಕೊಲೆ ಮಾಡಲು ಇಬ್ಬರೂ ಸೇರಿ ಯೋಜನೆ ರೂಪಿಸಿದ್ದರು.

ವಿಷಯ ತಿಳಿದ ಕೂಡಲೇ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸುಶ್ಮಿತಾ ಮತ್ತು ರಾಹುಲ್‌ನನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ, ಸುಶ್ಮಿತಾ ಮತ್ತು ರಾಹುಲ್ ಕಳೆದ ಎರಡು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ.
ಹೆಚ್ಚು ಔಷಧಿ ಕೊಡು… ಬಾಯಿ ತೆರೆಯುತ್ತಿಲ್ಲ, ನೀನು ಬಾ’: ಚಾಟ್‌ನಲ್ಲಿ ಬಯಲು
ಪೊಲೀಸರಿಗೆ ಲಭ್ಯವಾದ ಚಾಟ್‌ಗಳು ಕೊಲೆಗಾರರ ಕ್ರೂರ ಮನಸ್ಥಿತಿಯನ್ನು ಬಯಲು ಮಾಡಿವೆ. ರಾಹುಲ್, ಸುಶ್ಮಿತಾಗೆ ಪದೇ ಪದೇ ‘ಹೆಚ್ಚು ಔಷಧಿ ಕೊಡು’, ‘ಏನೂ ಹೊಳೆಯದಿದ್ದರೆ ವಿದ್ಯುತ್ ಆಘಾತ ಕೊಡು’ ಎಂದು ಸೂಚಿಸಿದ್ದ.
ಒಂದು ಚಾಟ್‌ನಲ್ಲಿ ಸುಶ್ಮಿತಾ, “ಔಷಧಿ ತಿಂದ ಮೇಲೆ ಸಾಯೋಕೆ ಎಷ್ಟು ಹೊತ್ತು ಬೇಕಾಗುತ್ತೆ ನೋಡು. ಅವನು ತಿಂದು ಮೂರು ಗಂಟೆಯಾಗಿದೆ, ಆದ್ರೆ ವಾಂತಿ ಇಲ್ಲ, ಮಲವಿಸರ್ಜನೆ ಇಲ್ಲ, ಏನೂ ಇಲ್ಲ. ಇನ್ನೂ ಸತ್ತಿಲ್ಲ ಕೂಡಾ” ಎಂದು ಕೇಳಿದ್ದಾಳೆ.
“ನಾವು ಏನು ಮಾಡಬೇಕು? ಏನಾದರೂ ಹೇಳಿ?” ಎಂದು ಸುಶ್ಮಿತಾ ಕೇಳಿದಾಗ, ರಾಹುಲ್ ನಿರ್ದಯವಾಗಿ, “ಏನೂ ಹೊಳೆಯದಿದ್ದರೆ, ವಿದ್ಯುತ್ ಆಘಾತ ಕೊಡು” ಎಂದು ಉತ್ತರಿಸಿದ್ದಾನೆ.
ಸುಶ್ಮಿತಾ: “ಶಾಕ್ ಕೊಡೋಕೆ ಅವನನ್ನು ಹೇಗೆ ಕಟ್ಟಬೇಕು?”
ರಾಹುಲ್: “ಟೇಪ್ ಉಪಯೋಗಿಸು.”
ಸುಶ್ಮಿತಾ: “ಅವನ ಉಸಿರಾಟ ತುಂಬಾ ನಿಧಾನವಾಗಿದೆ.”
ರಾಹುಲ್: “ನಿನ್ನ ಬಳಿ ಇರುವ ಎಲ್ಲಾ ಔಷಧಿಗಳನ್ನು ಕೊಡು.”
ಸುಶ್ಮಿತಾ: “ಅವನ ಬಾಯಿ ತೆರೆಯೋದಕ್ಕೆ ಆಗ್ತಿಲ್ಲ. ನೀರು ಹಾಕಬಹುದು, ಆದ್ರೆ ಔಷಧಿ ಕೊಡೋಕೆ ಆಗ್ತಿಲ್ಲ. ನೀನು ಇಲ್ಲಿಗೆ ಬಾ, ಬಹುಶಃ ನಾವಿಬ್ಬರೂ ಸೇರಿ ಕೊಡಿಸೋಕೆ ಆಗಬಹುದು.”
ಆಸ್ತಿ ಮತ್ತು ಸ್ವಚ್ಛಂದ ಜೀವನಕ್ಕಾಗಿ ಕೊಲೆ!
ಕರಣ್ ಕುಟುಂಬದ ಪ್ರಕಾರ, ಈ ಅಮಾನುಷ ಕೊಲೆಯ ಹಿಂದಿನ ಪ್ರಮುಖ ಉದ್ದೇಶ ಸುಶ್ಮಿತಾ ಮತ್ತು ರಾಹುಲ್ ಒಟ್ಟಾಗಿ ಬದುಕಲು ಹಾಗೂ ಕರಣ್ ಅವರ ಸಂಪೂರ್ಣ ಆಸ್ತಿಯ ಮೇಲೆ ಹಿಡಿತ ಸಾಧಿಸುವುದಾಗಿತ್ತು.
ಪ್ರಕರಣದ ತನಿಖೆ ಮುಂದುವರಿದಿದ್ದು, ಸುಶ್ಮಿತಾ ಮತ್ತು ರಾಹುಲ್ ಇಬ್ಬರೂ ಪೊಲೀಸ್ ವಶದಲ್ಲಿದ್ದಾರೆ. ಪೊಲೀಸರು ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲು ಮತ್ತು ಈ ಭೀಕರ ಪಿತೂರಿಯ ಇತರ ವಿವರಗಳನ್ನು ದೃಢೀಕರಿಸಲು ವಿಚಾರಣೆಯನ್ನು ಮುಂದುವರಿಸಿದ್ದಾರೆ.



















