ಬೆಂಗಳೂರು: ನಮ್ಮ ಹಣದ ವಹಿವಾಟೇ ಈಗ ಹೊಸ ರೂಪಾಂತರಗೊಂಡಿದೆ. ನಮ್ಮಲ್ಲಿ ಬಹುತೇಕ ಮಂದಿ ನಗದು ಇಟ್ಟುಕೊಂಡು ತಿರುಗಾಡುವುದೇ ಇಲ್ಲ. ಎಲ್ಲ ಕಡೆಯೂ ಯುಪಿಐ ಮೂಲಕ ಹಣ ಪಾವತಿಸುತ್ತಾರೆ. ಇಷ್ಟಾದರೂ, ಕೆಲವೊಂದು ಸಂದರ್ಭಗಳಲ್ಲಿ ನಗದಿನ ಅವಶ್ಯಕತೆ ಎದುರಾಗುತ್ತದೆ. ಆಗ ಎಟಿಎಂಗಳನ್ನು ಹುಡುಕಬೇಕಾಗುತ್ತದೆ. ಆದರೆ, ಶೀಘ್ರದಲ್ಲಿಯೇ ಹಣ ವಿತ್ ಡ್ರಾ ಮಾಡಲು ಎಟಿಎಂಗಳಿಗೆ ಹೋಗುವ ಬದಲು, ಒಂದು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಯೇ ಹಣವನ್ನು ಪಡೆಯಬಹುದಾಗಿದೆ.
ಹೌದು, ಎಟಿಎಂ ಇಲ್ಲದೆಯೇ, ಬಿಸಿನೆಸ್ ಕರೆಸ್ಪಾಂಡಂಟ್ ಗಳು, ಅಂಗಡಿ ವ್ಯಾಪಾರಿಗಳ ಮೂಲಕ ಜನರು ಹಣವನ್ನು ವಿತ್ ಡ್ರಾ ಮಾಡುವ ವ್ಯವಸ್ಥೆ ಜಾರಿ ಕುರಿತು ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು (ಎನ್ ಪಿ ಸಿ ಐ) ಭಾರತೀಯ ರಿಸರ್ವ್ ಬ್ಯಾಂಕಿಗೆ ಪ್ರಸ್ತಾಪ ಸಲ್ಲಿಸಿದೆ. ಇದಕ್ಕೇನಾದರೂ ಆರ್ ಬಿ ಐ ಅನುಮೋದನೆ ನೀಡಿದರೆ, ದೇಶದಲ್ಲಿ ಮತ್ತೊಂದು ಡಿಜಿಟಲ್ ಕ್ರಾಂತಿಯಾಗಲಿದೆ ಎಂದೇ ಹೇಳಲಾಗುತ್ತಿದೆ.
ಇದರ ಕಾರ್ಯನಿರ್ವಹಣೆ ಹೇಗೆ?
ನಿಮಗೆ ಕ್ಯಾಶ್ ಬೇಕೆಂದರೆ, ನೋಂದಾಯಿತ ಬಿಸಿನೆಸ್ ಕರೆಸ್ಪಾಂಡಂಟ್ ಗಳ ಬಳಿ ತೆರಳುವುದು
ಯುಪಿಐ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ, ಅವರಿಗೆ ಹಣ ಕಳುಹಿಸುವುದು
ನಿಮಗೆ ಬೇಕಾದ ಮೊತ್ತವನ್ನು ಕಳಿಸಿದರೆ, ಅಷ್ಟೇ ಮೊತ್ತವನ್ನು ಅವರು ಕ್ಯಾಶ್ ನೀಡುತ್ತಾರೆ
ಹೊಸ ಸೌಲಭ್ಯವನ್ನು ದೇಶಾದ್ಯಂತ ಇರುವ 20 ಲಕ್ಷಕ್ಕೂ ಹೆಚ್ಚು ಬಿಸಿನೆಸ್ ಕರೆಸ್ಪಾಂಡೆಂಟ್ ಗಳ ಮೂಲಕ ವಿಸ್ತರಿಸಲು ಭರದ ಸಿದ್ಧತೆ ನಡೆಯುತ್ತಿದೆ. ಬಿಸಿನೆಸ್ ಕರೆಸ್ಪಾಂಡೆಂಟ್ ಗಳು ಬ್ಯಾಂಕ್ ಶಾಖೆಗಳಿಲ್ಲದ ದೂರದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆ ಒದಗಿಸುವ ಏಜೆಂಟರಾಗಿದ್ದಾರೆ. ಮೂಲಗಳ ಪ್ರಕಾರ, ಬಿಸಿ ಕೇಂದ್ರಗಳಲ್ಲಿ ಪ್ರತಿ ಬಾರಿಗೆ 10,000 ರೂ.ವರೆಗೆ ನಗದು ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸುವ ಸಾಧ್ಯತೆಯಿದೆ. ಇದು ಬಯೋಮೆಟ್ರಿಕ್ ಮತ್ತು ಎಟಿಎಂ ಕಾರ್ಡ್ ಬಳಸಿ ವಿತ್ ಡ್ರಾ ಮಾಡುವ ಮಿತಿಗೆ ಸಮನಾಗಿರುತ್ತದೆ.



















