ಅಹಮದಾಬಾದ್: ಅಹಮದಾಬಾದ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡವು ಮೊದಲ ಇನಿಂಗ್ಸ್‌ನಲ್ಲಿ ಕೇವಲ 162 ರನ್‌ಗಳಿಗೆ ಆಲೌಟ್ ಆಗಿದ್ದರು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (100), ಧ್ರುವ್ ಜುರೆಲ್ (125) ಹಾಗೂ ರವೀಂದ್ರ ಜಡೇಜಾ (104) ಶತಕ ಸಿಡಿಸಿದ್ದರು. ಈ ಶತಕಗಳ ನೆರವಿನೊಂದಿಗೆ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಇದರೊಂದಿಗೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 286 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತ್ತು.
ಇನ್ನು ಭಾರೀ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. 24 ರನ್ ಗಳಿಸುವಷ್ಟರಲ್ಲಿ ವಿಂಡೀಸ್ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಅಲಿಕ್ ಅಥನಾಜೆ(38) ಹಾಗೂ ಜಸ್ಟೀನ್ ಗ್ರೀವಿಸ್(25) ಕೊಂಚ ಪ್ರತಿರೋಧ ತೋರಿದ್ದು ಬಿಟ್ಟರೇ ಉಳಿದ್ಯಾವ ಬ್ಯಾಟರ್‌ಗಳು ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ.
ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡವು 146 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 4 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 3, ಕುಲ್ದೀಪ್ ಯಾದವ್ 2 ಹಾಗೂ ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದು ಮಿಂಚಿದರು.