ಬೆಂಗಳೂರು: ಕಂಪನಿಯಲ್ಲಿ ಕಾಸ್ಟ್ ಕಟಿಂಗ್ ಅಂತಲೋ ಏನೋ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗುತ್ತದೆ. ಇಲ್ಲವೇ, ನೀವೇ ಬಿಸಿನೆಸ್ ಶುರು ಮಾಡಲು ಕೆಲಸ ಬಿಟ್ಟಿರುತ್ತೀರಿ. ಅಲ್ಲದೆ, ನೀವು ಸೇರುವ ಬೇರೊಂದು ಕಂಪನಿಯಲ್ಲಿ ಪಿಎಫ್ ಸೌಲಭ್ಯ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಹೆಚ್ಚಿನ ಜನ ಪಿಎಫ್ ಖಾತೆಯಲ್ಲಿರುವ ಹಣವನ್ನು ವಿತ್ ಡ್ರಾ ಮಾಡುತ್ತಾರೆ. ಆದರೆ, ಹೀಗೆ ವಿತ್ ಡ್ರಾ ಮಾಡುವುದರಿಂದ ಉದ್ಯೋಗಿಗಳಿಗೆ ಪಿಎಫ್ ಮೇಲೆ ಲಭಿಸುವ ಬಡ್ಡಿಯ ಲಾಭ ಸಿಗುವುದಿಲ್ಲ.
ಹೌದು, ನೀವು ಉದ್ಯೋಗ ಕಳೆದುಕೊಂಡರೆ ಮತ್ತು ನೀವು ಬೇರೆ ಯಾವುದೇ ಕೆಲಸವನ್ನು ಮಾಡದಿದ್ದರೆ, ನಿಮ್ಮ ಪಿಎಫ್ ಖಾತೆಯಲ್ಲಿ ಯಾವುದೇ ಹೊಸ ಮೊತ್ತವನ್ನು ಜಮಾ ಮಾಡಲಾಗುವುದಿಲ್ಲ. ಆದರೂ, ನಿಮ್ಮ ಪಿಎಫ್ ಖಾತೆಯಲ್ಲಿ ಇರುವ ಮೊತ್ತದ ಮೇಲೆ ನೀವು ಬಡ್ಡಿಯನ್ನು ಪಡೆಯುತ್ತಿರುತ್ತೀರಿ. ಆದರೆ, 3 ವರ್ಷಗಳವರೆಗೆ ಮಾತ್ರ ನಿಮಗೆ ಬಡ್ಡಿ ಸಿಗುತ್ತದೆ. 3 ವರ್ಷಗಳ ನಂತರ, ನೀವು ಕೆಲಸ ಮಾಡದಿದ್ದರೆ ಮತ್ತು ನಿಮ್ಮ ಸಂಬಳದಿಂದ ನಿಮ್ಮ ಪಿಎಫ್ ಖಾತೆಯಲ್ಲಿ ಯಾವುದೇ ಹಣವನ್ನು ಜಮಾ ಮಾಡದಿದ್ದರೆ, ಬಡ್ಡಿ ಜಮೆಯಾಗುವುದು ಸ್ಥಗಿತಗೊಳ್ಳುತ್ತದೆ.
ನೀವು ಉದ್ಯೋಗ ಕಳೆದುಕೊಂಡಿದ್ದರೆ, ನಿಮ್ಮ ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಆದರೆ, ಇದಕ್ಕಾಗಿ ಇಪಿಎಫ್ ಒ ಕೆಲವು ನಿಯಮಗಳನ್ನು ರೂಪಿಸಿದೆ. ಉದ್ಯೋಗ ಕಳೆದುಕೊಂಡ 1 ತಿಂಗಳ ನಂತರ ನಿಮ್ಮ ಪಿಎಫ್ ಖಾತೆಯಿಂದ ಶೇ.75 ರಷ್ಟು ಹಣವನ್ನು ಹಿಂಪಡೆಯಬಹುದು. ಕೆಲಸ ಕಳೆದುಕೊಂಡ 2 ತಿಂಗಳ ನಂತರ ನಿಮ್ಮ ಪಿಎಫ್ ಖಾತೆಯಿಂದ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಆದರೆ, ಹೀಗೆ ಎಲ್ಲ ಹಣವನ್ನು ವಿತ್ ಡ್ರಾ ಮಾಡಿದರೆ, ನಿಮಗೆ ಬಡ್ಡಿಯ ಲಾಭ ತಪ್ಪಿಹೋಗುತ್ತದೆ.
ಹಾಗಾಗಿ, ಕೆಲಸ ಬಿಟ್ಟ ಕೂಡಲೇ, ಪಿಎಫ್ ಹಣವನ್ನು ವಿತ್ ಡ್ರಾ ಮಾಡುವುದು ಒಳ್ಳೆಯ ತೀರ್ಮಾನ ಅಲ್ಲ, ನಿಮ್ಮ ಹಣಕಾಸು ಪರಿಸ್ಥಿತಿ ಚೆನ್ನಾಗಿದ್ದರೆ, ಮೂರು ವರ್ಷಗಳವರೆಗೆ ಪಿಎಫ್ ಮೊತ್ತವನ್ನು ಹಾಗೆಯೇ ಬಿಡುವ ಮೂಲಕ ಬಡ್ಡಿಯ ಲಾಭವನ್ನು ಪಡೆಯುವುದು ಉತ್ತಮ ಎಂಬುದು ತಜ್ಞರ ಸಲಹೆಯಾಗಿದೆ.



















