ಬೆಂಗಳೂರು: ದೇಶದಲ್ಲಿ ಏಕೀಕೃತ ಪಾವತಿ ವ್ಯವಸ್ಥೆ ಅಥವಾ ಯುಪಿಐ ಮೂಲಕ ಪೇಮೆಂಟ್ ಮಾಡುವುದು ಈಗ ಜನರ ಜೀವನ ವಿಧಾನವೇ ಆಗಿದೆ. ಅಂಗಡಿಯಲ್ಲಿ ಕಾಲು ಲೀಟರ್ ಹಾಲಿನ ಪ್ಯಾಕೆಟ್ ನಿಂದ ಹಿಡಿದು, ಸಾವಿರಾರು ರೂಪಾಯಿ ಮೌಲ್ಯದ ಉತ್ಪನ್ನ ಖರೀದಿಸಿದರೂ ಯುಪಿಐ ಮೂಲಕವೇ ಪಾವತಿ ಮಾಡಲಾಗುತ್ತಿದೆ. ಯುಪಿಐ ಮೂಲಕವೇ ಲಕ್ಷಾಂತರ ಕೋಟಿ ರೂ. ವಹಿವಾಟು ನಡೆಯುತ್ತಿದೆ. ಇದರ ಮಧ್ಯೆಯೇ, ಯುಪಿಐ ಪಾವತಿಗಳಿಗೆ ಹೆಚ್ಚಿನ ಶುಲ್ಕ (UPI Charges) ವಿಧಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ ಈಗ ಮಹತ್ವದ ಸ್ಪಷ್ಟನೆ ನೀಡಿದ್ದಾರೆ.
“ಯುಪಿಐ ಮೂಲಕ ಹಣ ಪಾವತಿಸುವುದಕ್ಕೆ ಹೆಚ್ಚಿನ ಶುಲ್ಕ ವಿಧಿಸುವ ಯಾವುದೇ ಪ್ರಸ್ತಾಪ ಭಾರತೀಯ ರಿಸರ್ವ್ ಬ್ಯಾಂಕ್ ಬಳಿ ಇಲ್ಲ. ಸದ್ಯಕ್ಕೆ ದೇಶದ ಜನ ಉಚಿತವಾಗಿಯೇ ಯುಪಿಐ ಮೂಲಕ ಹಣ ಪಾವತಿ ಮಾಡಬಹುದಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ, ಗ್ರಾಹಕರಿಗೆ ಇದ್ದ ಆತಂಕವು ದೂರವಾದಂತಾಗಿದೆ. ಯುಪಿಐ ಪೇಮೆಂಟ್ ಗಳಿಗೂ ಶುಲ್ಕ ವಿಧಿಸಲಾಗುತ್ತದೆ ಎಂಬುದು ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಭವಿಷ್ಯದ ದಿನಗಳಲ್ಲಿ ಮಾತ್ರ ಯುಪಿಐ ಸಂಪೂರ್ಣವಾಗಿ ಉಚಿತವಾಗಿ ಇರುವುದಿಲ್ಲ ಎಂಬುದರ ಕುರಿತು ಆರ್ ಬಿ ಐ ಗವರ್ನರ್ ಸ್ಪಷ್ಟಪಡಿಸಿದ್ದಾರೆ. “ಯುಪಿಐ ಪಾವತಿ ಎಂದಿಗೂ ಉಚಿತವಾಗಿರುತ್ತದೆ ಎಂದು ಆರ್ ಬಿ ಐ ತಿಳಿಸಿಲ್ಲ. ಯುಪಿಐ ಪಾವತಿಗಳಿಗೆ ಹಣ ಖರ್ಚಾಗುತ್ತದೆ. ಅದನ್ನು ಯಾರಾದರೂ ಪಾವತಿ ಮಾಡಬೇಕಾಗುತ್ತದೆ” ಎಂದು ಹೇಳಿದ್ದಾರೆ. ಸದ್ಯ, ಯುಪಿಐಗೆ ತಗುಲುವ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿದೆ.
ಕಳೆದ ಒಂದು ವರ್ಷದಲ್ಲಿ ಯುಪಿಐ ಮೂಲಕ ಪಾವತಿ ಮಾಡುವುದರಲ್ಲಿ ಶೇ.31ರಷ್ಟು ಏರಿಕೆಯಾಗಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿಯೇ ದೇಶಾದ್ಯಂತ 19.63 ಶತಕೋಟಿ ಪಾವತಿಗಳು ಯುಪಿಐ ಮೂಲಕ ನಡೆದಿವೆ. ಸುಮಾರು 25 ಲಕ್ಷ ಕೋಟಿ ರೂಪಾಯಿ ವಹಿವಾಟು ಒಂದೇ ತಿಂಗಳಲ್ಲಿ ಯುಪಿಐ ಮೂಲಕ ನಡೆದಿರುವುದು ಗಮನಾರ್ಹ ಸಂಗತಿಯಾಗಿದೆ. ದೇಶದ ಕೋಟ್ಯಂತರ ಜನ ಯುಪಿಐ ಮೂಲಕವೇ ಪಾವತಿ ಮಾಡುತ್ತಿದ್ದಾರೆ.