ಸುಮ್ಮನಿರದೆ ಕರೆದು ಹೊಡಿಸಿಕೊಂಡರು ಎನ್ನುವ ಮಾತನ್ನು ಅದ್ಯಾರು, ಅದ್ಯಾಕೆ, ಅದ್ಯಾವಾಗ ಹೇಳಿದ್ರೋ ದೇವರಾಣೆ ಗೊತ್ತಿಲ್ಲ. ಆದರೆ, ಈ ಪಾಕಿಸ್ತಾನದ ಕ್ಯಾತೆಗಳನ್ನು ನೋಡಿದರೆ ಇವರನ್ನು ನೋಡಿಯೇ ಈ ಮಾತನ್ನು ಹೇಳಿರಬೇಕು ಅಂತಾ ಅನ್ನಿಸುತ್ತಿದೆ. ಯಾಕೆಂದ್ರೆ, ತನ್ನ ತಟ್ಟೆಯಲ್ಲೇ ತಿನ್ನೋಕೆ ಅನ್ನವಿಲ್ಲ, ಅಂಥದ್ರಲ್ಲಿ ಉಗ್ರರ ತಟ್ಟೆಗೆ ಬಿರಿಯಾನಿ ಹಾಕಿ ಕೈಗೆ ಬಂದೂಕು ಕೊಟ್ಟು ಭಾರತದ ವಿರುದ್ಧ ಎತ್ತಿಕಟ್ಟೋ ಕೆಲಸ ಮಾಡುತ್ತಿದೆ.ಈ ತಪ್ಪಿಗೀಗ ದೊಡ್ಡ ಬೆಲೆ ತೆರೆಬೇಕಾದ ಸಮಯ ಬಂದಿದೆ. ಪಾಕಿಸ್ಥಾನದಲ್ಲಿ ಶೀಘ್ರವೇ ತರಕಾರಿ, ಕೋಳಿ, ಕೋಳಿ ಮೊಟ್ಟೆಯ ಅಭಾವ ಸೃಷ್ಟಿಯಾಗಬಹುದು.
ಅಟಾರಿ-ವಾಘಾ ಬಾರ್ಡರ್ ಬಂದ್
..ಭಾರತ-ಪಾಕಿಸ್ಥಾನದ ನಡುವೆ ಅದೆಷ್ಟೇ ದ್ವೇಷ, ವೈಮನಸ್ಸಿರಬಹುದು. ಆದರೆ, ವ್ಯಾಪಾರ ವಹಿವಾಟುಗಳು ಸದ್ದಿಲ್ಲದೆ ದಶಕಗಳಿಂದಲೂ ನಿರಂತರವಾಗಿ ತನ್ನ ಪಾಡಿಗೆ ತಾನು ನಡೆಯುತ್ತಲೇ ಬರುತ್ತಿವೆ. ಕಳೆದ ಏಳು ದಶಕಗಳಿಂದ ಭಾರತದ ವಾಘಾ-ಅಟಾರಿ ಗಡಿ ಮೂಲಕ ಸಾವಿರಾರು ಕೋಟಿಯ ವಹಿವಾಟು ನಡೆದಿದಿರುವುದು ಇದಕ್ಕೆ ಸಾಕ್ಷಿ. ಭಾರತವೀಗ ಈ ಗಡಿಗೇ ಬೀಗ ಜಡಿದಿದೆ. ನರಮೇಧ ನಡೆಸಿದ ಕಟುಕರ ಸಂಹಾರವಾಗುವವರೆಗೂ ಪಾಕ್ ಜೊತೆಗಿನ ಏಕೈಕ ಭೂವ್ಯವಹಾರಿಕ ಸಂಪರ್ಕವನ್ನೇ ತುಂಡರಿಸಲಾಗಿದೆ. ಇದು ಅಂದಾಜು 3860 ಕೋಟಿಗೂ ಹೆಚ್ಚಿನ ಉದ್ಯಮವನ್ನು ಮಕಾಡೆ ಮಲಗಿಸುತ್ತಿದೆ.
ಭಾರತದಿಂದ ಪಾಕಿಸ್ಥಾನಕ್ಕೆ ಏನೆಲ್ಲಾ ರಫ್ತಾಗುತ್ತೆ…?
ಸೋಯಾಬೀನ್
ಕೋಳಿ
ಕೋಳಿ ಮೊಟ್ಟೆ
ಕೋಳಿಗಳಿಗೆ ಆಹಾರ
ತರಕಾರಿ
ಕೆಂಪು ಮೆಣಸಿನಕಾಯಿ
ಕಚ್ಚಾ ಪ್ಲ್ಯಾಸ್ಟಿಕ್
ಪ್ಲ್ಯಾಸ್ಟಿಕ್ ಉತ್ಪನ್ನಗಳು
ಭಾರತದ ಮೇಲೆ ಪಾಕಿಸ್ಥಾನ ಹಲವು ವಿಚಾರಗಳಲ್ಲಿ ಅವಲಂಬಿತವಾಗಿದೆ. ಅದರಲ್ಲೂ ಹಿಂದುಸ್ಥಾನದಿಂದಲೇ ನೆರೆಯ ಪಾಕಿಗೆ ವಾಘಾ ಗಡಿಯ ಮೂಲಕವೇ ಸೋಯಾಬೀನ್, ಕೋಳಿ, ಕೋಳಿ ಮೊಟ್ಟೆ, ಕೋಳಿಗಳಿಗೆ ಆಹಾರ, ತರಕಾರಿ, ಕೆಂಪು ಮೆಣಸಿನಕಾಯಿ, ಕಚ್ಚಾ ಪ್ಲ್ಯಾಸ್ಟಿಕ್ ಹಾಗೂ ಪ್ಲ್ಯಾಸ್ಟಿಕ್ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಆದ್ರೀಗ ಗಡಿ ಬಂದ್ ಆಗಿರೋದ್ರಿಂದ ಈ ಯಾವ ಸರಕೂ ಪಾಕಿಸ್ಥಾನಕ್ಕೆ ಎಂಟ್ರಿಯಾಗುವುದಿಲ್ಲ.
ಪಾಕಿಸ್ಥಾನದಿಂದ ಭಾರತಕ್ಕೆ ಏನೆಲ್ಲಾ ಬರುತ್ತೆ…?
ಅಟಾರಿ ಗಡಿ ಬಂದ್ ಆಗಿರೋದು ಭಾರತಕ್ಕೂ ಕೆಲ ವಿಚಾರಗಳಲ್ಲಿ ಹಿನ್ನಡೆಯನ್ನು ತರ್ತಿದೆ. ಪಾಕಿಸ್ಥಾನದಿಂದ ಭಾರತ ಹಲವು ಸಾಮಾಗ್ರಿಗಳನ್ನು ಆಮದು ಮಾಡಿಕೊಳ್ತಿದೆ. ಈ ಪೈಕಿ ಪ್ರಮುಖವಾಗಿ ಡ್ರೈ ಪ್ರೂಟ್ಸ್, ಒಣಗಿದ ಖರ್ಜೂರ, ಜಿಪ್ಸಂ, ಸಿಮೆಂಟ್, ಹತ್ತಿ, ನಾರು, ಗಾಜು, ರಾಕ್ ಸಾಲ್ಟ್, ಹಲವು ಬಗೆಯ ಗಿಡಮೂಲಿಕೆ ಸಾಮಾಗ್ರಿಗಳನ್ನು ಆಮದು ಮಾಡಿಕೊಳ್ತಿದೆ. ಅಷ್ಟೇ ಅಲ್ಲಾ ಪಾಕ್ ಮಾರ್ಗವಾಗೇ ಅಫ್ಘಾನಿಸ್ಥಾನದಿಂದಲೂ ಆಮದಾಗೋ ಹಾದಿಯೂ ಈ ಮೂಲಕ ಬಂದ್ ಆಗಿದೆ.
ಅಟಾರಿಯಲ್ಲಿ ಭಾರತ ಬರೋಬ್ಬರಿ 120 ಎಕರೆ ವ್ಯಾಪ್ತಿಯಲ್ಲಿ ಬೃಹತ್ ಭೂ ಬಂದರನ್ನು ನಿರ್ಮಿಸಿದೆ. ಈ ಬಂದರಿನಲ್ಲೇ ಭಾರತ-ಪಾಕ್ ನಡುವಿನ ಸಮಸ್ತ ವಹಿವಾಟು ನಡೆಯುತ್ತೆ. ವಾರ್ಷಿಕ 3860 ಕೋಟಿಗಳಷ್ಟು ವಹಿವಾಟಿಗೆ ಈ ಗಡಿ ಸಾಕ್ಷಿಯಾಗುತ್ತಿತ್ತು. ಅಲ್ಲದೆ, ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಬಹುತೇಕ ಉದ್ಯಮ ಭಾರತದ ಈ ಗಡಿಯ ಮೇಲೆಯೇ ನಿರ್ಬರವಾಗಿದೆ. ಆದರೀಗ ಉಭಯ ದೇಶಗಳ ನಡುವಿನ ವೈಮನಸ್ಸು ಅದೆಷ್ಟೋ ಅಮಾಯಕ ವ್ಯಾಪಾರಿಗಳನ್ನು ಬೀದಿಗೆ ತರಲಿದೆ.
ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಈ ಗಡಿಯನ್ನೇ ನಂಬಿ ಎರಡೂ ದೇಶದ ನೂರಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಆದರೆ, ಉಗ್ರವಾದದ ಪರ ನಿಂತ ಪಾಕಿಗಳ ಹೇಯ ಮನಸ್ಥಿತಿ ಅದೆಷ್ಟೋ ದುಡಿದು ತಿನ್ನೋ ಜೀವಗಳನ್ನು ಹಿಂಡುತ್ತಿರುವುದು ಮಾತ್ರ ಸತ್ಯ.