ಭೋಪಾಲ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಾಂಧವ್ಯದ ಕುರಿತು ಮಧ್ಯಪ್ರದೇಶದ ನಗರಾಭಿವೃದ್ಧಿ ಸಚಿವ ಕೈಲಾಶ್ ವಿಜಯವರ್ಗೀಯ ನೀಡಿದ್ದ ಹೇಳಿಕೆಯ ವಿವಾದ ತಾರಕಕ್ಕೇರಿದೆ. ಇದೀಗ ಅವರ ಸಂಪುಟ ಸಹೋದ್ಯೋಗಿ ವಿಜಯ್ ಶಾ, ವಿಜಯವರ್ಗೀಯ ಅವರನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳುವ ಮೂಲಕ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.
ಖಾಂಡ್ವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ವಿಜಯ್ ಶಾ, “ಇದು ನಮ್ಮ ಸಂಸ್ಕೃತಿಯಲ್ಲ; ನಮ್ಮ ನಾಗರಿಕತೆ, ಪದ್ಧತಿ ಮತ್ತು ಸಂಪ್ರದಾಯಗಳು ಇದನ್ನು ಕಲಿಸುವುದಿಲ್ಲ. ಅವರು ಕಲಿತದ್ದನ್ನು ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳಲಿ, ಸಾರ್ವಜನಿಕ ಸ್ಥಳಗಳಲ್ಲಲ್ಲ,” ಎಂದು ಸಹೋದರ-ಸಹೋದರಿಯರ ನಡುವಿನ ಸಾರ್ವಜನಿಕ ಪ್ರೀತಿ ಪ್ರದರ್ಶನವನ್ನು ಟೀಕಿಸಿದರು. ಇತ್ತೀಚೆಗಷ್ಟೇ ವಿಜಯವರ್ಗೀಯ ಅವರು, “ರಾಹುಲ್ ಅವರು ಪ್ರಿಯಾಂಕಾರನ್ನು ಸಾರ್ವಜನಿಕವಾಗಿ ಚುಂಬಿಸುವುದನ್ನು” ವಿರೋಧಿಸಿ ನೀಡಿದ್ದ ಹೇಳಿಕೆಯು ವಿವಾದ ಸೃಷ್ಟಿಸಿತ್ತು.

ಇದರ ಬೆನ್ನಲ್ಲೇ ವಿಜಯ್ ಶಾ ಅವರೂ ವಿಜಯವರ್ಗೀಯರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಲ್ಲದೇ, ತಮ್ಮ ಭಾಷಣದ ವೇಳೆ ವೇದಿಕೆಯಲ್ಲಿದ್ದ ಶಾಸಕಿ ಕಾಂಚನ್ ತನ್ವೆ ಅವರತ್ತ ಕೈತೋರಿಸಿ, “ಅವರು ಕೂಡ ನನ್ನ ಸಹೋದರಿ, ಹಾಗೆಂದು ನಾನು ಅವರಿಗೆ ಸಾರ್ವಜನಿಕವಾಗಿ ಮುತ್ತಿಡಲು ಸಾಧ್ಯವೇ? ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆ ಇದನ್ನು ಕಲಿಸುವುದಿಲ್ಲ,” ಎಂದು ಹೇಳುವ ಮೂಲಕ ವಿವಾದವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಕಾಂಗ್ರೆಸ್ ತೀವ್ರ ಆಕ್ರೋಶ
ಸಚಿವರ ಈ ಹೇಳಿಕೆಗಳಿಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಕೈಲಾಶ್ ವಿಜಯವರ್ಗೀಯ ಅವರ ಪ್ರತಿಕೃತಿ ದಹಿಸಿದೆ. ಕಾಂಗ್ರೆಸ್ ವಕ್ತಾರ ಕೆ.ಕೆ. ಮಿಶ್ರಾ, “ಅವಹೇಳನಕಾರಿ ಭಾಷೆ ಬಳಸುವ ಬಿಜೆಪಿ ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ,” ಎಂದು ಕಿಡಿಕಾರಿದ್ದಾರೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜೀತು ಪಟ್ವಾರಿ, ವಿಜಯವರ್ಗೀಯ ಅವರ ಹೇಳಿಕೆಯನ್ನು “ಅಸಹ್ಯಕರ” ಎಂದು ಕರೆದಿದ್ದು, “ಇದು ಭಾರತದ ಸಂಸ್ಕೃತಿ, ಸಂಪ್ರದಾಯ ಮತ್ತು ಪವಿತ್ರ ಸಹೋದರ-ಸಹೋದರಿ ಸಂಬಂಧಕ್ಕೆ ಮಾಡಿದ ನೇರ ಸವಾಲು,” ಎಂದು ಹೇಳಿದ್ದಾರೆ. ಮುಖ್ಯಮಂತ್ರಿಯಾಗಲು ಸಾಧ್ಯವಾಗದ ಹತಾಶೆಯಿಂದ 70ರ ವಯಸ್ಸಿನಲ್ಲಿ ವಿಜಯವರ್ಗೀಯ ಅವರು ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ, ಇಬ್ಬರೂ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಈ ಹಿಂದೆಯೂ ವಿವಾದ ಸೃಷ್ಟಿಸಿದ್ದ ವಿಜಯ್ ಶಾ
ವಿಜಯ್ ಶಾ ಅವರು ವಿವಾದಾತ್ಮಕ ಹೇಳಿಕೆ ನೀಡುವುದು ಇದೇ ಮೊದಲೇನಲ್ಲ. 2025ರ ಮೇ 13 ರಂದು, ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ನಂತರ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ, “ನಮ್ಮ ಹೆಣ್ಣುಮಕ್ಕಳ ಸಿಂದೂರವನ್ನು ಅಳಿಸಿದವರನ್ನು ಬೆತ್ತಲೆಗೊಳಿಸಲು ಉಗ್ರರ ಸಹೋದರಿಯನ್ನೇ ಕಳುಹಿಸಿದೆವು…” ಎಂದು ಹೇಳುವ ಮೂಲಕ ತೀವ್ರ ವಿವಾದಕ್ಕೆ ಕಾರಣರಾಗಿದ್ದರು. ನಂತರ ಅವರು, “ನಾನು ದೇವರಲ್ಲ, ಮನುಷ್ಯ. ಯಾರ ಭಾವನೆಗಳಿಗಾದರೂ ನೋವಾಗಿದ್ದರೆ ಹತ್ತು ಬಾರಿ ಕ್ಷಮೆಯಾಚಿಸುತ್ತೇನೆ,” ಎಂದು ಹೇಳಿ ಕ್ಷಮೆಯಾಚಿಸಿದ್ದರು.