ಬುಲ್ಢಾನಾ (ಮಹಾರಾಷ್ಟ್ರ): ಪತ್ನಿ ಜತೆ ನಡೆದ ಜಗಳದ ಬಳಿಕ, ವ್ಯಕ್ತಿಯೊಬ್ಬ ತನ್ನ ನಾಲ್ಕು ವರ್ಷದ ಅವಳಿ ಹೆಣ್ಣುಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ಬುಲ್ಢಾನಾ ಜಿಲ್ಲೆಯಲ್ಲಿ ನಡೆದಿದೆ. ವಾಶಿಮ್ ಜಿಲ್ಲೆಯ ನಿವಾಸಿ ರಾಹುಲ್ ಚವಾಣ್ ಈ ಕೃತ್ಯ ಎಸಗಿದ ಆರೋಪಿ.
ಅಕ್ಟೋಬರ್ 21ರಂದು ರಾಹುಲ್ ಚವಾಣ್, ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ. ಮಾರ್ಗಮಧ್ಯೆ ದಂಪತಿಯ ನಡುವೆ ಜಗಳ ಆರಂಭವಾಗಿದೆ. ಜಗಳ ತಾರಕಕ್ಕೇರುತ್ತಿದ್ದಂತೆ, ಆತನ ಪತ್ನಿ ಬೈಕ್‌ನಿಂದ ಇಳಿದು ಕಾಲ್ನಡಿಗೆಯಲ್ಲಿ ತನ್ನ ತವರು ಮನೆಗೆ ಹೊರಟುಹೋಗಿದ್ದಾಳೆ. ಬಳಿಕ, ರಾಹುಲ್ ತನ್ನ ಮಕ್ಕಳೊಂದಿಗೆ ಪ್ರಯಾಣ ಮುಂದುವರಿಸಿ, ಅಂಧೇರಾ ಗ್ರಾಮವನ್ನು ತಲುಪಿದ್ದಾನೆ.
ಅಲ್ಲಿನ ಸಮೀಪದ ಅರಣ್ಯ ಪ್ರದೇಶಕ್ಕೆ ಮಕ್ಕಳನ್ನು ಕರೆದೊಯ್ದ ರಾಹುಲ್, ಇಬ್ಬರ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಕೃತ್ಯದ ನಂತರ, ಆತ ತನ್ನ ಗ್ರಾಮಕ್ಕೆ ಮರಳಿದ್ದಾನೆ.
ಪೊಲೀಸ್ ಠಾಣೆಯಲ್ಲಿ ತಪ್ಪೊಪ್ಪಿಗೆ
ಘಟನೆ ನಡೆದ ನಾಲ್ಕು ದಿನಗಳ ನಂತರ, ರಾಹುಲ್ ಚವಾಣ್ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ತನ್ನ ಮಕ್ಕಳನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದು, ಘಟನಾ ಸ್ಥಳ ಅಂಧೇರಾ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವುದರಿಂದ ಅಲ್ಲಿನ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಪೊಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸಿ, ಅರಣ್ಯ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಷ್ಟರಲ್ಲೇ ಅಲ್ಲಿ ಮಕ್ಕಳ ಮೃತದೇಹಗಳು ಕೊಳೆಯಲಾರಂಭಿಸಿದ್ದವು. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಕೆಲವು ವರದಿಗಳ ಪ್ರಕಾರ, ಮೃತದೇಹಗಳು ಭಾಗಶಃ ಸುಟ್ಟಿದ್ದು, ಸಾಕ್ಷ್ಯ ನಾಶಪಡಿಸಲು ಆರೋಪಿ ಬೆಂಕಿ ಹಚ್ಚಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.
ರಾಹುಲ್ ಚವಾಣ್‌ನನ್ನು ಬಂಧಿಸಿರುವ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ : ಕರ್ನೂಲ್ ಬಸ್ ದುರಂತದ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ.. 4 ನಿಗಮಗಳಿಗೆ ಖಡಕ್ ಸೂಚನೆ!
 
                                 
			 
			
 
                                 
                                


















