ಬೆಂಗಳೂರು: ದೇಶದ ಪ್ರಮುಖ ಮೆಸೆಂಜರ್ ಅಪ್ಲಿಕೇಶನ್ ಆಗಿರುವ ವಾಟ್ಸ್ ಆ್ಯಪ್ ಈಗ ಹೊಸ ಫೀಚರ್ ಪರಿಚಯಿಸಿದೆ. ಅದರಲ್ಲೂ, ವಾಟ್ಸ್ಆ್ಯಪ್ ಬಳಕೆದಾರರ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಇಲ್ಲದ ವ್ಯಕ್ತಿಯೊಬ್ಬರನ್ನು ಹೊಸದಾಗಿ ಗ್ರೂಪ್ ಗೆ ಸೇರಿಸಿದಾಗ, ಈ ಕುರಿತು ಬಳಕೆದಾರರಿಗೆ ಅಥವಾ ಗುಂಪಿನ ಸದಸ್ಯರಿಗೆ ಸಂದೇಶ ರವಾನಿಸುವ ಹೊಸ ಫೀಚರ್ ಅನ್ನು ವಾಟ್ಸ್ ಆ್ಯಪ್ ಪರಿಚಯಿಸಿದೆ.
ಹೌದು, ವಾಟ್ಸ್ ಆ್ಯಪ್ ಈಗ ಸೇಫ್ಟಿ ಓವರ್ ವ್ಯೂ (Safety Overview) ಎಂಬ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಯಾವುದೇ ವಾಟ್ಸ್ ಆ್ಯಪ್ ಗ್ರೂಪಿಗೆ ಹೊಸದಾಗಿ ಸದಸ್ಯರು ಜಾಯಿನ್ ಆದರೆ, ಅಥವಾ ಬೇರೊಬ್ಬರು ಸೇರಿಸಿದರೆ, ಅವರ ಬಗ್ಗೆ ಹೆಚ್ಚಿನ ಮಾಹಿತಿ ಕುರಿತು ಇತರ ಬಳಕೆದಾರರಿಗೆ ಮಾಹಿತಿ ನೀಡುವುದು ಇದರ ಪ್ರಮುಖ ಲಕ್ಷಣವಾಗಿದೆ. ಆ ಮೂಲಕ ಗ್ರಾಹಕರ ಸುರಕ್ಷತೆಗಾಗಿ ಸಂಸ್ಥೆಯು ಹೆಚ್ಚಿನ ಪ್ರಾಮುಖ್ಯತೆ ನೀಡಿದೆ.
ಯಾವುದೇ ಗ್ರೂಪ್ ಗೆ ಸೇರ್ಪಡೆಯಾದ ಅಥವಾ ಗ್ರೂಪಿನ ಸದಸ್ಯರೇ ಸೇರ್ಪಡೆ ಮಾಡಿದ್ದರೂ, ಹೊಸ ಸದಸ್ಯನು ತಾನು ಗ್ರೂಪ್ ನಲ್ಲಿ ಮುಂದುವರಿಯುತ್ತೇನೆ ಎಂಬುದಾಗಿ ಘೋಷಣೆ ಮಾಡುವವರಿಗೆ ಆ ಗ್ರೂಪಿನಲ್ಲಿ ನಡೆಸುವ ಚಾಟ್, ಕಳುಹಿಸುವ ಸಂದೇಶಗಳು ಹೊಸ ಸದಸ್ಯನಿಗೆ ಘೋಷಣೆಯಾಗುವುದಿಲ್ಲ. ಹಾಗೊಂದು ವೇಳೆ, ಅನಾಮಧೇಯ ವ್ಯಕ್ತಿಗಳು ಯಾವುದೇ ಸದಸ್ಯನನ್ನು ಗ್ರೂಪಿಗೆ ಸೇರಿಸಿದರೆ, ಅಲ್ಲಿನ ಚರ್ಚೆಯನ್ನು ಗಮನಿಸದೆಯೇ ಆ ಸದಸ್ಯ ಗ್ರೂಪಿನಿಂದ ಹೊರನಡೆಯಬಹುದಾಗಿದೆ.
ಬಳಕೆದಾರರ ಸುರಕ್ಷತೆ, ವಂಚನೆ ತಡೆಗೆ ಹೊಸ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಾಟ್ಸ್ ಆ್ಯಪ್ ತಿಳಿಸಿದೆ. ಅಲ್ಲದೆ, ಇತ್ತೀಚೆಗೆ ಭಾರತದಲ್ಲಿ ವಾಟ್ಸ್ ಆ್ಯಪ್ ನ 68 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ ಎಂದೂ ಕಂಪನಿ ತಿಳಿಸಿದೆ. ವಂಚನೆ, ಸಮಾಜದ ಶಾಂತಿ ಕದಡುವ ಸಂದೇಶಗಳ ರವಾನೆ, ನಕಲಿ ಸುದ್ದಿ ಹರಡುವುದು ಸೇರಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿದವರ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ.



















