ಹಾಸನ: ಜಿಲ್ಲೆಯಲ್ಲಿ ಹೃದಯಾಘಾತ ಪ್ರತಿಯೊಬ್ಬರನ್ನೂ ಬೆಚ್ಚಿ ಬೀಳಿಸುತ್ತಿದೆ. ಇಂದು ಮತ್ತೋರ್ವ ವ್ಯಕ್ತಿ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
30 ವರ್ಷದ ಸಂಜಯ್ ಹೃದಯಾಘಾತಕ್ಕೆ ಬಲಿಯಾಗಿರುವ ವ್ಯಕ್ತಿ. ಸ್ನೇಹಿತರ ಜೊತೆ ಪಾರ್ಟಿಗೆ ಹೋಗಿದ್ದ ಸಂದರ್ಭದಲ್ಲಿ ಬಿಪಿ ಹೆಚ್ಚಾಗಿ ಸಂಜಯ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸೋಮವಾರ ಸಂಜೆ ಎದೆ ನೋವು ಎಂದು ಸೋಮನಹಳ್ಳಿ ಪ್ರಾಥಮಿಕ ಆಸ್ಪತ್ರೆಗೆ ಸಂಜಯ್ ಹೋಗಿದ್ದರು. ನಡೆಯಲೂ ಆಗದ ಸ್ಥಿತಿಯಲ್ಲಿದ್ದ ಸಂಜಯ್ ನನ್ನು ಸ್ನೇಹಿತರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಬಿಪಿ ಪರೀಕ್ಷೆ ಮಾಡಿದ ವೈದ್ಯರು 220ಕ್ಕೂ ಅಧಿಕ ಪ್ರಮಾಣದಲ್ಲಿ ಬಿಪಿ ಇರುವ ಬಗ್ಗೆ ಮಾಹಿತಿ ನೀಡಿದ್ದರು. ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ರೆಫರ್ ಮಾಡಿದ್ದರು.
ಸಂಜಯ್ ಕಳೆದ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಹಳ್ಳಿಮೈಸೂರು ಠಾಣೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವು ಎಂದು ಪ್ರಕರಣ ದಾಖಲಾಗಿದೆ. ನಿನ್ನೆ ಒಂದೇ ದಿನ ಹಾಸನ ಜಿಲ್ಲೆಯಲ್ಲಿ ಆರು ಹೃದಯಾಘಾತ ಪ್ರಕರಣಗಳು ವರದಿಯಾಗಿವೆ. ಜೂನ್ 27 ರಂದು ಈಶ್ವರಪ್ಪ ಹಾಗೂ ಜೂನ್ 30 ರಂದು ಕುಮಾರ್(53) ಲೇಪಾಕ್ಷಿ(51), ಮುತ್ತಯ್ಯ(58) ಸತ್ಯನಾರಾಯಣ ರಾವ್(63) ಹಾಗು ಸಂಜಯ್(27) ಸಾವನ್ನವ್ವಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. 40 ದಿನಗಳಲ್ಲಿ 24 ಜನರಿಗೆ ಹೃದಯಾಘಾತವಾಗಿದೆ.