ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್-12’ ಶುರುವಾಗಿದೆ. ಹೊಸ ಮನೆ, ವಿಭಿನ್ನ ಥೀಮ್ ಮತ್ತು ಯಾರು ಊಹಿಸಲಾಗದ ಟ್ವಿಸ್ಟ್ ಜೊತೆಗೆ ‘ಬಿಗ್ ಬಾಸ್-12’ ಮನೆಯ ಬಾಗಿಲು ತೆರೆದುಕೊಂಡಿದೆ. ಈ ಸಲ ಬಿಗ್ ಬಾಸ್ ಆಟ ಮಾಮೂಲಿಯಾಗಿರಲ್ಲ ಎಂಬ ಪ್ರಾಮಿಸ್ ಜೊತೆಗೆ ಬಿಗ್ ಬಾಸ್ ಹೇಗೆ ಆರಂಭವಾಗಿದೆ ನೀವೆ ನೋಡಿ.

‘ಬಿಗ್ ಬಾಸ್’ ಶುರು ಆಯಿತು ಎಂದರೆ ರಾತ್ರಿ ಹೊತ್ತು ಮಕ್ಕಳಿಂದ ಮುದುಕರವರೆಗೂ ಟಿವಿ ಮುಂದೆ ಕುಳಿತುಕೊಳ್ಳುವುದು ಗ್ಯಾರಂಟಿ. ಯಾವಾಗಲೂ ಒಂದಲ್ಲ ಒಂದು ವಿಷಯಕ್ಕೆ ವಿವಾದಗಳನ್ನು ಸೃಷ್ಟಿಸಿಕೊಂಡು, ನಿರಂತರ ಮನರಂಜನೆ ಕೊಡುತ್ತಾ ಬಂದಿರುವ ಮಹಾಮನೆ ಬಿಗ್ ಬಾಸ್ ಮತ್ತೆ ಹೊಸ ಆಲೋಚನೆಗಳ ಜೊತೆಗೆ ಎಂಟ್ರಿ ಕೊಟ್ಟಿದೆ. ಕರ್ನಾಟಕದ ಸಂಸ್ಕೃತಿಯನ್ನು ಪರಿಚಯಿಸುವ ಮನೆಯ ಡಿಸೈನ್ ಈ ಸಲದ ಮೈನ್ ಹೈಲೇಟ್. ಕಿಚ್ಚ ಸುದೀಪ್ ಎನರ್ಜಿ ಕೂಡ ಈ ಬಾರಿ ಬೇರೆಯದೇ ರೇಂಜಿಗೆ ಕಾಣಿಸುತ್ತಿದೆ.

ʼಮ್ಯಾಕ್ಸ್’ ನಂತರ ಸಿನಿಮಾಗಳಲ್ಲೇ ಬ್ಯುಸಿಯಾಗಿದ್ದ ಸುದೀಪ್, ‘ನಾನು ಮುಂದಿನ ಸಲದ ಬಿಗ್ ಬಾಸ್ ನಿರೂಪಣೆ ಮಾಡಲ್ಲ’ ಎಂದು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಆದರೆ ಮತ್ತೆ ಕಲರ್ಸ್ ಕನ್ನಡ ವಾಹಿನಿಯ ಮನವಿ ಮತ್ತು ಅಭಿಮಾನಿಗಳ ಒತ್ತಾಯವನ್ನು ಅರ್ಥ ಮಾಡಿಕೊಂಡ ಸುದೀಪ್, ಸೀಸನ್-12ರ ನಿರೂಪಣೆಗೆ ಥಮ್ಸ್ ಅಪ್ ಮಾಡಿದ್ದರು. ಸುದೀಪ್ ಗೆ ಬಿಟ್ಟರೆ ಬಿಗ್ ಬಾಸ್ ನಿರೂಪಣೆ ಯಾರಿಗೂ ಸೆಟ್ ಆಗಲ್ಲ ಎಂದಿದ್ದ ಕಿಚ್ಚನ ಬಳಗಕ್ಕೂ ದೊಡ್ಡ ರಿಲೀಫ್ ಸಿಕ್ಕಿತು. ಈಗ ಮತ್ತೆ ಹೊಸ ಗೆಟಪ್, ಪೈಸಾವಸೂಲ್ ಸ್ಟೈಲ್ ಜೊತೆಗೆ ಸುದೀಪ್ ಬಿಗ್ ಬಾಸ್ ವೇದಿಕೆ ಹತ್ತಿದ್ದಾರೆ. ‘ಅಸಲಿ ಆಟ ಈಗ ಶುರು’ ಅಂತ ಕಾತುರತೆಯ ಬೆಂಕಿ ಹಚ್ಚಿದ್ದಾರೆ.
‘ಬಿಗ್ ಬಾಸ್-12’ನಲ್ಲಿ 19 ಸ್ಪರ್ಧಿಗಳ ಆಗಮನವಾಗಿದೆ. ಇಲ್ಲಿ ಬೇರೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಟಗರು ಖ್ಯಾತಿಯ ಕಾಕ್ರೋಚ್ ಸುಧೀ, ಸೀರಿಯಲ್ ನಟಿ ಸ್ಪಂದನ ಸೋಮಣ್ಣ, ಅಡುಗೆ ಮಾಡುವ ಕರಾವಳಿ ಹುಡುಗಿ ರಕ್ಷಿತಾಶೆಟ್ಟಿ, ಸಿಲ್ಲಿಲಲ್ಲಿ ಖ್ಯಾತಿಯ ಮಂಜುಭಾಷಿಣಿ, 50 ಕೋಟಿ ನಾಯಿ ಒಡೆಯ ಡಾಗ್ ಬ್ರಿಡರ್ ಸತೀಶ್, ಮನದಕಡಲು ಹೀರೋಯಿನ್ ರಾಶಿಕ ಶೆಟ್ಟಿ, ಉತ್ತರಕರ್ನಾಟಕದ ಮಲ್ಲಮ್ಮ, ನಾ ಡ್ರೈವರಾ ಸಾಂಗ್ ಖ್ಯಾತಿಯ ಮಾಳು, ಕಾಮೆಡಿ ನಟ ಚಂದ್ರಪ್ರಭಾ, ಗೀತಾ ಸೀರಿಯಲ್ ನಟ ಧನುಷ್, ಹಾಸ್ಯದ ಹೊನಲು ಹರಿಸುವ ಗಿಲ್ಲಿನಟ, ಕೊತ್ತಲವಾಡಿ ಖ್ಯಾತಿಯ ಕಾವ್ಯ ಶೈವ, ಬಾಡಿಬಿಲ್ಡರ್ ಕರಿಬಸಪ್ಪ, ಖ್ಯಾತ ನಿರೂಪಕಿ ಜಾನ್ವಿ, ವಿವಾದದಿಂದ ಹೆಸರುವಾಸಿಯಾದ ನಟ ಧ್ರುವಂತ್, ಕನ್ನಡಪರ ಹೋರಾಟಗಾರ್ತಿ ಅಶ್ವಿನಿಗೌಡ, ಮುದ್ದುಲಕ್ಷ್ಮಿ ಸೀರಿಯಲ್ ನಟಿ ಅಶ್ವಿನಿ, RJ ಅಮಿತ್ ಹಾಗೂ ವಧು ಸೀರಿಯಲ್ ನಟ ಅಭಿಷೇಕ್ ಬಿಗ್ ಬಾಸ್ ಮನೆಗೆ ಹಾಜರಾಗಿದ್ದಾರೆ.

ಮೊದಲ ಪ್ರೊಮೋದಲ್ಲೇ ಎಲಿಮಿನೆಷನ್ ಭಯ ಹುಟ್ಟಿಸಿರುವ ‘ಬಿಗ್ ಬಾಸ್’ ಸ್ಪರ್ಧಿಗಳಿಗೆ ಎಚ್ಚರದಿಂದ ಆಡುವಂತೆ ಒಂದು ಬಿಗ್ ಸಿಗ್ನಲ್ ಕೊಟ್ಟಿದೆ. ಹೊರಪ್ರಪಂಚದಿಂದ ಒಂದೇ ಮನೆಗೆ ಬಂದು ಹೊಂದಿಕೊಳ್ಳುವ ಮೊದಲ ಸವಾಲು ಬಿಗ್ ಬಾಸ್ ಸ್ಪರ್ಧೆಗಳಿಗಿದೆ. ಜಗಳ, ಪ್ಲಾನಿಂಗ್ ಮತ್ತು ನಾಮಿನೇಷನ್ ಗಳ ಬಲೆ ಈ ಸಲವೂ ವೀಕ್ಷಕರನ್ನು ಸೆಳೆಯುವ ಟಾರ್ಗೆಟ್ ಇಟ್ಕೊಂಡಿದೆ. 100 ದಿನಗಳ ಆಟ, 19 ಸ್ಪರ್ಧಿಗಳ ಕೌತುಕವೇ ಬಿಗ್ ಬಾಸ್ ಅಸಲಿ ಮಜಾ..!