ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terrorists Attack) ಉಗ್ರರ ಗುಂಡಿನ ದಾಳಿಗೆ ಇಡೀ ವಿಶ್ವವೇ ಕೆಂಡಾಮಂಡಲವಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಅಮೆರಿಕ ಸೇರಿದಂತೆ ಹಲವು ಪ್ರಮುಖ ರಾಷ್ಟ್ರಗಳು ಘಟನೆಯನ್ನು ಖಂಡಿಸಿವೆ.
ಉಗ್ರರ ದಾಳಿಯಲ್ಲಿ 30ಕ್ಕೂ ಅಧಿಕ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಖಂಡಿಸಿದ ಡೊನಾಲ್ಡ್ ಟ್ರಂಪ್, ಭಾರತದೊಂದಿಗೆ ನಾವಿದ್ದೇವೆ. ಭಯೋತ್ಪಾದನೆಯ ವಿರುದ್ಧ ನಾವು ಗಟ್ಟಿಯಾಗಿ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ಟ್ವೀಟ್ ಮಾಡಿರುವ ಟ್ರಂಪ್, ಕಾಶ್ಮೀರದಲ್ಲಿ ಇಂದು ನಡೆದ ಘಟನೆ ತೀವ್ರ ಆತಂಕಕಾರಿ ಸುದ್ದಿ. ಭಯೋತ್ಪಾದನೆಯ ವಿರುದ್ಧ ಅಮೆರಿಕ ಭಾರತದೊಂದಿಗೆ ಬಲವಾಗಿ ನಿಂತಿದೆ. ಸಾವನ್ನಪ್ಪಿದವರ ಆತ್ಮಗಳಿಗೆ ಮತ್ತು ಗಾಯಗೊಂಡವರ ಚೇತರಿಕೆಗಾಗಿ ನಾವು ಪ್ರಾರ್ಥಿಸುತ್ತೇವೆ. ಪ್ರಧಾನಿ ಮೋದಿ ಮತ್ತು ಭಾರತದ ಪ್ರೀತಿಯ ಜನರಿಗೆ ನಮ್ಮ ಸಂಪೂರ್ಣ ಬೆಂಬಲ ಮತ್ತು ಸಹಾನುಭೂತಿ ಇದೆ. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಬರೆದುಕೊಂಡಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಬೃಹತ್ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದಾರೆ.