ಬೆಂಗಳೂರು : ಇಂದು ಫ್ರೀಡಂ ಪಾರ್ಕ್‌ನಲ್ಲಿ ಮತ ಕಳ್ಳತನ ವಿರೋಧಿಸಿ ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ. ಇದನ್ನು ವಿರೋಧಿಸಿ ವಿಧಾನಸೌಧದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ .ಅಶೋಕ್ ಮತ್ತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಜಂಟಿ ಸುದ್ದಿಗೋಷ್ಠಿಯನ್ನು ನಡೆಸಿದರು.
ಈ ವೇಳೆ ಆರ್ .ಅಶೋಕ್ ಮಾತನಾಡಿ, ರಾಹುಲ್ ಗಾಂಧಿ ಬೆಂಗಳೂರಿಗೆ ಪಾರ್ಟಿ ಮಾಡಲು ಬಂದಿದ್ದಾರೋ.? ಬಿರಿಯಾನಿ ತಿನ್ನಲು ಬಂದಿದ್ದಾರೋ.? ಸಿಎಂ, ಡಿಸಿಎಂ ಜಗಳ ಬಿಡಿಸಲು ಬಂದಿದ್ದಾರೋ ಗೊತ್ತಿಲ್ಲ. ಆದರೆ ಅವರ ಬಾಂಬ್ ಇದೀಗ ಠುಸ್ ಪಟಾಕಿಯಾಗಿದೆ ಎಂದು ರಾಹುಲ್ ವಿರುದ್ಧ ಅಶೋಕ್ ವ್ಯಂಗ್ಯವಾಡಿದರು.
ರಾಹುಲ್ ಮಾಡಿರುವ ಆರೋಪಕ್ಕೆ ದಾಖಲೆ ಬಿಡುಗಡೆ ಮಾಡಿದ ಆರ್ .ಅಶೋಕ್, ಚುನಾವಣೆ ಆಕ್ಟ್ 1950ರಲ್ಲಿ ಕಾಂಗ್ರೆಸ್ ಕಾಲದಲ್ಲಿ ಆಗಿದೆ. ವೋಟರ್ ಲಿಸ್ಟ್ ನ್ನ ಬಿ.ಎಲ್.ಎ ಗಳು ಮಾಡುತ್ತಾರೆ. ಪಾರ್ಟಿಗಳ ಬಿ.ಎಲ್.ಎ ಯಾರು ಎಂದು ಸರ್ಟಿಫೈ ಮಾಡುವುದು ಕಾಂಗ್ರೆಸ್ ಪಕ್ಷ ನೀಡಿದೆ. ಮಹಾದೇವಪುರ ಕ್ಷೇತ್ರದಲ್ಲಿ ಬಿ.ಎಲ್.ಎ ಯಾರು ಎಂದು ನೀಡಿದ್ದು ಕಾಂಗ್ರೆಸ್. ಮೊದಲ ಕಾಪಿ ಕಾಂಗ್ರೆಸ್ ಏಜೆಂಟ್ ಗೆ ನೀಡುತ್ತಾರೆ. ಹಾಗಾದರೆ ಏಜೆಂಟ್ ಏನು ಮಾಡುತ್ತಿದ್ದರು ? ಹೆಸರು ತಪ್ಪಿದ್ದರೆ ಸೇರಿಸುವುದು, ವಿಳಾಸ ಬದಲಾವಣೆ ಮಾಡುವುದು ಕೂಡ ಬಿ.ಎಲ್.ಎ ಮಾಡುತ್ತಾರೆ. ಹಾಗಾದರೆ ಹೆಚ್ಚು ಹೆಸರು ಸೇರಿಸಿದ್ದರೆ ಅದು ಬಿಎಲ್‌ಎ ಕಾಸು ಪಡೆದವನಾ? ಕಾಸು ಪಡೆದು ಹೆಸರು ಸೇರಿಸಿದ್ದಾನಾ? ಅಲ್ಲದೇ ಬಿಎಲ್‌ಎ ನೇಮಕ ಮಾಡಿದ್ದೆ ಡಿಕೆ ಶಿವಕುಮಾರ್. ಓಟರ್ ಲಿಸ್ಟ್ ರೆಡಿ ಮಾಡುವುದಕ್ಕೆ ಮೋದಿ ಹೇಳುತ್ತಾರೆ. ಅವರು ಬಂದು ಹೆಸರು ಸೇರಿಸಲು ಹೇಳುತ್ತಾರಾ? ಟ್ರಬಲ್ ಶೂಟರ್ ಆಗ ಏನು ಮಾಡುತ್ತಿದ್ದರು ಎಂದು ಡಿಕೆಶಿ ವಿರುದ್ಧ ಅಶೋಕ್ ಕಿಡಿಕಾರಿದ್ದಾರೆ.
ಚುನಾವಣೆಯಲ್ಲಿ ಗೆದ್ದಾಗ ಎಲ್ಲ ಸರಿ ಇರುತ್ತದೆ. ಚುನಾವಣೆಯಲ್ಲಿ ಸೋತಾಗ ಚುನಾವಣಾ ಆಯೋಗ ಸರಿಯಿಲ್ಲ ಎನ್ನುತ್ತಿದ್ದಾರೆ. ಕಾಂಗ್ರೆಸ್ ನಾಲ್ಕು ತಲೆ ಮಾರಿನಿಂದ ಮೋಸದಿಂದ ಗೆಲ್ಲುತ್ತಿದ್ದರು. ಮತಪೆಟ್ಟಿಗೆಗಳನ್ನು ತೆಗದುಕೊಂಡು ಹೋಗುತ್ತಿದ್ದರು. ಇವರಿಗೆ ಆ ರೀತಿ ಚುನಾವಣಾ ನಡೆಯಬೇಕು ಅನಿಸುತ್ತದೆ. ವಿಧಾನಸಭೆ ಚುನಾವಣೆಯಲ್ಲಿ ಇದೇ ಓಟರ್ ಲಿಸ್ಟ್ ಇತ್ತು. ಲೋಕಸಭಾ ಚುನಾವಣೆಯಲ್ಲೂ ಇದೇ ವೋಟರ್ ಲಿಸ್ಟ್ ಇತ್ತು. ನಿಮಗೆ ಅಷ್ಟೊಂದು ಅನುಮಾನ ಇದ್ದಲ್ಲಿ ನಿಮ್ಮ ಸರ್ಕಾರ ವಿಸರ್ಜನೆ ಮಾಡಿ ನೋಡಿ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಅಶೋಕ್ ಸವಾಲು ಹಾಕಿದ್ದಾರೆ.
ನಿಮಗೆ 136 ಸೀಟ್ ಬಂದರೆ ಚುನಾವಣಾ ಆಯೋಗ ಪಾರದರ್ಶಕ ಇದೆ ಎನ್ನುತ್ತೀರಿ. ಮೋದಿ, ಬಿಜೆಪಿಯವರನ್ನು ಟಾರ್ಗೆಟ್ ಮಾಡುತ್ತೀರಿ. ಬಿಹಾರದಲ್ಲಿ ಇವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ನಾವು 66 ಸ್ಥಾನ ಇವರು 136 ಸ್ಥಾನ ಗೆದ್ದಿದ್ದಾರೆ. ನನ್ನ ಪದ್ಮನಾಭ ನಗರ ಕ್ಷೇತ್ರದಲ್ಲಿ ನನಗೆ ಇನ್ನೂ 20 ಸಾವಿರ ಮತ ಲೀಡ್ ಬರಬೇಕು. ಕಾಂಗ್ರೆಸ್ ನವರು ಅಲ್ಲಿ ಮುಸ್ಲಿಮರನ್ನು ತಂದು ಸೇರಿಸಿದ್ದಾರೆ. ಇದು ನನ್ನ ಆರೋಪ, ಇದಕ್ಕೆ ಉತ್ತರ ಕೊಡುತ್ತಾರಾ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.