ಚಾಮರಾಜನಗರ: ಮತಗಳ್ಳತನ ಪ್ರಾರಂಭವಾಗಿದ್ದೆ ನೆಹರೂ ಅವರಿಂದ ಅಂಬೇಡ್ಕರ್ ಅವರು ಪ್ರಥಮ ಚುನಾವಣೆಯಲ್ಲಿ ಸೋಲಿಗೆ ಕಾಂಗ್ರೆಸ್ ಮಾಡಿದ ಮತಗಳ್ಳತನವೇ ಕಾರಣ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಛಲವಾದಿ, ಕಾಂಗ್ರೆಸ್ ಮಾಡುತ್ತಿರುವುದು ನೆಗೆಟಿವ್ ಪಾಲಿಟಿಕ್ಸ್, ಕಾಂಗ್ರೆಸ್ ಇನ್ನೂ ಬದುಕಿದೆ ಎಂದು ತೋರಿಸಲು ಈ ರೀತಿ ಪ್ರತಿಭಟನೆ ಮಾಡುತ್ತಿದೆ. ಮತಗಳ್ಳತನ ಆಗಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನ ಗೆಲ್ಲುತಿತ್ತಾ? ರಾಹುಲ್ ಗಾಂಧಿ ಈ ದೇಶದ ವಿರೋಧ ಪಕ್ಷದ ನಾಯಕರಾಗಲು ಸಾಧ್ಯವಾಗುತ್ತಿತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಸೀಟು ಜಾಸ್ತಿ ಆದರೆ ಅದು ಮತಗಳ್ಳತನ ಅಲ್ಲ. ಎಲ್ಲಿ ಜನ ನಿಮಗೆ ಛೀಮಾರಿ ಹಾಕಿರುತ್ತಾರೆ ಅಲ್ಲಿ ಮತಗಳ್ಳತನವಾಗಿದೆ ಎಂದು ಹೇಳುತೀರಿ. ಈ ಡಬಲ್ ಸ್ಟ್ಯಾಂಡ್ ನ ಕಾಂಗ್ರೆಸ್ ಬಿಡಬೇಕು. ರಾಹುಲ್ ಗಾಂಧಿ ಅಪ್ರಬುದ್ಧ ನಾಯಕ ರಾಜ್ಯದಲ್ಲಿ ಕೃಪಾ ಪೋಷಿತ ನಾಟಕ ಮಂಡಳಿ ಮಾತು ಕೇಳಿ ಇಲ್ಲಿಗೆ ಬರುತ್ತಿದ್ದಾರೆಂದು ಕಿಡಿಕಾರಿದ್ದಾರೆ.
ಕೆಲವರು ಗಾಂಧಿ ಫ್ಯಾಮಿಲಿ ಮುಂದಿಟ್ಟುಕೊಂಡು ಬೆಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ. 1971ರಲ್ಲಿ ಇಂದಿರಾಗಾಂಧಿಗೆ ಅಲಹಾಬಾದ್ ಕೋರ್ಟ್ ಯಾವ ರೀತಿ ಛೀಮಾರಿ ಹಾಕಿದೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.
ಇನ್ನು, ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯಗೆ ಫ್ರೀ ಆಯ್ತು, ಅವರ ಹೆಂಡ್ತಿಗೂ ಫ್ರೀ ಆಯ್ತು, ಕಾಕಾ ಪಾಟೀಲ್‌ಗು ಫ್ರೀ ಆಯ್ತು, ಆದರೆ ಮಹದೇವಪ್ಪನಿಗೆ ಎಲ್ಲಿ ಫ್ರೀ ಆಯ್ತು? ಎಸ್‌ಸಿ ಎಸ್ಟಿ ವರ್ಗದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನೇ ಗ್ಯಾರಂಟಿ ಯೋಜನೆಗಳಿಗೂ ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಖಜಾನೆಯಿಂದ ಗ್ಯಾರಂಟಿ ಯೋಜನೆಗೆ ಹಣ ಕೊಡಬೇಕು. ಬೇರೆ ವರ್ಗಗಳಿಗೆ ಖಜಾನೆಯಿಂದ ಕೊಡುತ್ತೀರಿ. ಎಸ್‌ಸಿ ಎಸ್ಟಿ ವರ್ಗಕ್ಕೆ ಖಜಾನೆಯಿಂದ ಯಾಕೆ ಕೊಡುವುದಿಲ್ಲ. ಎಸ್‌ಸಿ ಎಸ್ಟಿ ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣದಲ್ಲಿ ಯಾಕೆ ಗ್ಯಾರಂಟಿ ಯೋಜನೆಗಲಿಗೆ ಕೊಡುತ್ತೀರಿ. ಇದು ಎಸ್‌ಸಿ ಎಸ್ಟಿ ವರ್ಗಗಳಿಗೆ ಬಗೆದ ದ್ರೋಹ ಅಲ್ಲವೆ? ಎಂದು ಪ್ರಶ್ನೆ ಮಾಡಿದ್ದಾರೆ.
ಎಸ್‌ಸಿ ಎಸ್ಟಿ ವರ್ಗದ ಅಭಿವೃದ್ಧಿಗೆ 42 ಸಾವಿರ ಕೋಟಿ ಘೋಷಣೆ ಮಾಡಿದ್ದರು ಕೂಡ ನಿಗಮಗಳಿಗೆ ಒಂದು ನಯಾ ಪೈಸೆ ಕೊಟ್ಟಿಲ್ಲ, ಹೀಗೆ ವಂಚನೆ ಮಾಡುತ್ತಿದ್ದರೂ ಹಲವಾರು ದಲಿತ ಸಂಘಟನೆಗಳು ಧ್ವನಿ ಎತ್ತುತ್ತಿಲ್ಲ. ಕಾಂಗ್ರೆಸ್ ಏನೆ ತಪ್ಪು ಮಾಡಿದರು ಅದರ ಜೊತೆ ಇರುತ್ತೇವೆ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿವೆ. ಕೆಲವು ದಲಿತ ಸಂಘಟನೆಗಳು ತಟಸ್ಥವಾಗಿವೆ. ಆ ಕಾರಣಕ್ಕಾಗಿಯೇ ನಾವು ಧ್ವನಿ ಎತ್ತಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಈಗ ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿ ಎಂಬುದು ಜನರಿಗೆ ಅರಿವಾಗುತ್ತಿದೆ ಎಂದು ಗುಡುಗಿದರು.