ನವದೆಹಲಿ: ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರು 4 ದಿನಗಳ ಪ್ರವಾಸಕ್ಕಾಗಿ ಸೋಮವಾರ ತಮ್ಮ ಪತ್ನಿ ಉಷಾ ಮತ್ತು ಮೂವರು ಮಕ್ಕಳೊಂದಿಗೆ ದೆಹಲಿಗೆ ಆಗಮಿಸಿದ್ದಾರೆ(JD Vance India Visit). ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸ್ವಾಗತಿಸಿದರು. ಅಲ್ಲೇ ಅಮೆರಿಕ ಉಪಾಧ್ಯಕ್ಷರಿಗೆ ಮೂರೂ ಪಡೆಗಳ ಗೌರವ ವಂದನೆ ಸಲ್ಲಿಸಲಾಯಿತು.
ವಿಶೇಷವೆಂದರೆ ಜೆಡಿ ವ್ಯಾನ್ಸ್ ಮತ್ತು ಉಷಾ ದಂಪತಿಯು ತಮ್ಮ ಮೂರೂ ಮಕ್ಕಳಿಗೆ ಭಾರತದ ಸಾಂಪ್ರದಾಯಿಕ ಉಡುಗೆಗಳನ್ನು ತೊಡಿಸಿದ್ದರು. ಇಬ್ಬರು ಪುತ್ರರು ಕುರ್ತಾ ಪೈಜಾಮಾ ಧರಿಸಿದ್ದರೆ, ಕಿರಿಯವಳಾದ ಮಗಳು ಅನಾರ್ಕಲಿ ಸೂಟ್ ಧರಿಸಿದ್ದರು. ದಂಪತಿಯ ಹಿರಿಯ ಮಗ ಇವಾನ್ ತನ್ನ ಭಾರತ ಪ್ರವಾಸಕ್ಕಾಗಿ ನೀಲಿ ಕುರ್ತಾ ಧರಿಸಿ ಮಿಂಚುತ್ತಿದ್ದ. ಅವನ ಕಿರಿಯ ಸಹೋದರ ಹಳದಿ ಕುರ್ತಾ ಧರಿಸಿದ್ದ.

ಜೆ.ಡಿ.ವ್ಯಾನ್ಸ್ ಅವರು ಪ್ರಧಾನಿ ಮೋದಿಯವರೊಂದಿಗೆ ಮಾತುಕತೆ ನಡೆಸಲಿದ್ದು, ಅದಾದ ನಂತರ ಮೋದಿ ಅವರು ವ್ಯಾನ್ಸ್ ಕುಟುಂಬಕ್ಕೆಂದೇ ವಿಶೇಷವಾಗಿ ಆಯೋಜಿಸಿರುವ ಔತಣಕೂಟದಲ್ಲಿ ಅವರು ಭಾಗಿಯಾಗಲಿದ್ದಾರೆ. ವ್ಯಾನ್ಸ್ ಅವರೊಂದಿಗೆ ಪೆಂಟಗನ್ ಮತ್ತು ವಿದೇಶಾಂಗ ಇಲಾಖೆಯ ಪ್ರತಿನಿಧಿಗಳು ಸೇರಿದಂತೆ ಐದು ಸದಸ್ಯರ ನಿಯೋಗವೂ ಭಾರತಕ್ಕೆ ಬಂದಿದೆ.
ಪ್ರಧಾನಿ ಮೋದಿಯವರನ್ನು ಭೇಟಿಯಾದ ನಂತರ, ಶ್ರೀ ವ್ಯಾನ್ಸ್ ಮತ್ತು ಅವರ ಕುಟುಂಬ ಜೈಪುರ ಮತ್ತು ಆಗ್ರಾಗೆ ಭೇಟಿ ನೀಡಲಿದೆ. ಮಂಗಳವಾರ, ವ್ಯಾನ್ಸ್ ಅಮೆರ್ ಅರಮನೆಗೆ ಭೇಟಿ ನೀಡಲಿದ್ದಾರೆ. ನಂತರ, ಅವರು ರಾಜಸ್ಥಾನ ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ಅಮೆರಿಕ-ಇಂಡಿಯಾ ಉದ್ಯಮ ಶೃಂಗಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಶೃಂಗಸಭೆಯಲ್ಲಿ ಭಾರತ ಮತ್ತು ಅಮೆರಿಕದ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದು, ವ್ಯಾನ್ಸ್ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯ ಬಗ್ಗೆ ಮಾತನಾಡುವ ನಿರೀಕ್ಷೆಯಿದೆ.

ಬುಧವಾರ, ಅವರು ತಾಜ್ ಮಹಲ್ ಭೇಟಿಗಾಗಿ ಆಗ್ರಾಕ್ಕೆ ಪ್ರಯಾಣಿಸಲಿದ್ದಾರೆ. ಸ್ಮಾರಕದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಕಳೆದ ನಂತರ, ಅವರು ಅಂದೇ ಮಧ್ಯಾಹ್ನ ಜೈಪುರಕ್ಕೆ ಮರಳಲಿದ್ದಾರೆ ಮತ್ತು ಜೈಪುರ ಅರಮನೆಗೆ ಭೇಟಿ ನೀಡಲಿದ್ದಾರೆ. ಗುರುವಾರ ವಾಷಿಂಗ್ಟನ್ ಗೆ ಮರಳಲಿದ್ದಾರೆ.