ವಾಷಿಂಗ್ಟನ್: ಜಗತ್ತಿನಾದ್ಯಂತ ಯಹೂದಿ ವಿರೋಧಿ ಭಯೋತ್ಪಾದನೆ ಹೆಚ್ಚಳವಾಗುತ್ತಿದ್ದು, ಅಮೆರಿಕದಲ್ಲಿ ಇಂದು ಇಸ್ರೇಲ್ ರಾಯಭಾರ ಕಚೇರಿಗೆ ಸಂಬಂಧಿಸಿದ ಇಬ್ಬರು ಸಿಬ್ಬಂದಿಯನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ನಡೆದಿದೆ. ವಾಷಿಂಗ್ಟನ್ ಡಿಸಿಯಲ್ಲಿರುವ ಕ್ಯಾಪಿಟಲ್ ಜೆವಿಶ್ ಮ್ಯೂಸಿಯಂ ಹೊರಗೆಯೇ ಈ ಕೃತ್ಯ ನಡೆದಿದೆ.
“ಫ್ರೀ, ಫ್ರೀ ಪ್ಯಾಲೆಸ್ತೀನ್”(ಪ್ಯಾಲೇಸ್ತೀನ್ ಅನ್ನು ಮುಕ್ತಗೊಳಿಸಿ) ಎಂದು ಘೋಷಣೆ ಕೂಗುತ್ತಿದ್ದ ಎಲಿಯಾಸ್ ರೋಡ್ರಿಗಸ್ ಎಂಬ 30 ವರ್ಷದ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಷಿಕಾಗೋ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿ ಪೊಲೀಸರು ಈ ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇಸ್ರೇಲ್ ರಾಯಭಾರ ಕಚೇರಿಯೂ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅಲ್ಲದೇ, ಶೂಟಿಂಗ್ ನಡೆದ ಸಮದಯಲ್ಲಿ ಇಸ್ರೇಲ್ ರಾಯಭಾರಿಯು ಆ ಸ್ಥಳದಲ್ಲಿ ಇರಲಿಲ್ಲ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಮ್ಯೂಸಿಯಂನಲ್ಲಿ ಯಹೂದಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ವೇಳೆ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಬಹಳ ಸಮೀಪದಿಂದ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ ಎಂದು ಇಸ್ರೇಲ್ ರಾಯಭಾರ ಕಚೇರಿಯ ವಕ್ತಾರ ತಾಲ್ ನೈಮ್ ಕೋಹೆನ್ ಹೇಳಿದ್ದಾರೆ. ನಮಗೆ ತನಿಖಾಧಿಕಾರಿಗಳ ಮೇಲೆ ಸಂಪೂರ್ಣ ನಂಬಿಕೆಯಿದೆ. ಅಮೆರಿಕದಲ್ಲಿರುವ ಇಸ್ರೇಲ್ ಪ್ರತಿನಿಧಿಗಳು ಹಾಗೂ ಯಹೂದಿ ಸಮುದಾಯವನ್ನು ರಕ್ಷಿಸುತ್ತೀರೆಂಬ ಭರವಸೆಯಿದೆ ಎಂದೂ ಹೇಳಿದ್ದಾರೆ.
ಘಟನೆಯ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಮ್ಮ ದೇಶದಲ್ಲಿ ದ್ವೇಷ ಮತ್ತು ತೀವ್ರಗಾಮಿತ್ವಕ್ಕೆ ಜಾಗವಿಲ್ಲ ಎಂದಿದ್ದಾರೆ. ಜೊತೆಗೆ ಯಹೂದಿ ವಿರೋಧಿ ಮನಸ್ಥಿತಿ ಇಂದೇ ಕೊನೆಯಾಗಬೇಕು ಎಂದೂ ಹೇಳಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.
ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್ ಪ್ರತಿಕ್ರಿಯಿಸಿದ್ದು, ಶೂಟೌಟ್ ಘಟನೆ ಬಗ್ಗೆ ನನಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಪರಿಸ್ಥಿತಿ ಮೇಲೆ ನಿಗಾ ವಹಿಸಲಾಗಿದೆ. ಶೀಘ್ರವೇ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.