ಅಮರಾವತಿ: ನಿಯಂತ್ರಣ ತಪ್ಪಿದ ಪರಿಣಾಮ ಕಾರೊಂದು ಬಾವಿಗೆ ಬಿದ್ದು ರಾಜ್ಯದ ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಬಾಲಂವರಿಪಲ್ಲಿಯಲ್ಲಿ ನಡೆದಿದೆ.
ಸಾವನ್ನಪ್ಪಿದವರನ್ನು ಚಿಂತಾಮಣಿ ಬಳಿಯ ತಂಡುಪಲ್ಲಿ ಮೂಲದವರು ಎನ್ನಲಾಗಿದೆ. ಲೋಕೇಶ್, ಚಲಪತಿ ಮತ್ತು ಶಿವಣ್ಣ ಎಂದು ಗುರುತಿಸಲಾಗಿದೆ. ಮೃತರು ಮದುವೆ ಸಮಾರಂಭಗಳಿಗೆ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಶನಿವಾರ ತಮಿಳುನಾಡಿನ ಹೊಸೂರಿನಲ್ಲಿ ನಡೆದ ಮದುವೆಯಲ್ಲಿ ಕ್ಯಾಟರಿಂಗ್ ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ಬಾಲಂವರಿಪಲ್ಲಿಯಲ್ಲಿ ಕಾರು ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದೆ.
ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಐವರು ಪ್ರಯಾಣಿಕರಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರಾದ ಸುನಿಲ್ ಹಾಗೂ ತಿಪ್ಪಾ ರೆಡ್ಡಿ ಕಾರಿನ ಹಿಂಭಾಗದ ಕಿಟಕಿಗಳನ್ನು ಒಡೆದು ಹೊರಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ ಪಿಲೇರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.