ಶಿವಮೊಗ್ಗ: ಸೋಗಾನೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ನೀಡಿದವರಿಗೆ ಪ್ರತಿಯಾಗಿ ನಿವೇಶನ ನೀಡಬೇಕು ಎಂದು ಆಗ್ರಹಿಸಿ, ಏರ್ಪೋಟ್ ಮುಂದೆ ಭೂಮಿ ಕಳೆದುಕೊಂಡ ರೈತರು ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದ್ದಾರೆ.
ಕಳೆದ 15 ವರ್ಷಗಳ ಹಿಂದೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾದಾಗ ಇಲ್ಲಿ ನೂರಾರು ರೈತರು ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದರು. ಈ ವೇಳೆ, ಸರ್ಕಾರವು ಬಗರ್ ಹುಕುಂ ಭೂಮಿ ಬಿಡಿಸಿಕೊಳ್ಳಲು ಮುಂದೆ ಬಂದಾಗ ರೈತರು ವಿರೋಧ ವ್ಯಕ್ತಪಡಿಸಿದ್ದರು. ಆಗ ಸರ್ಕಾರದಿಂದ ಪ್ರತಿ ಎಕರೆಗೆ ಎರಡು ಲಕ್ಷ ರೂ. ಹಣ ಹಾಗೂ ಒಂದು ನಿವೇಶನ ನೀಡುವ ಭರವಸೆ ನೀಡಲಾಗಿತ್ತು. ಅದರಂತೆ ಹಣವನ್ನು ರೈತರಿಗೆ ನೀಡಲಾಗಿತ್ತು. ಆದರೆ, ನಿವೇಶನ ನೀಡಿರಲಿಲ್ಲ. ಇದರಿಂದ ರೈತರು ವಿಮಾನ ನಿಲ್ದಾಣ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿದಾಗ ಅಂದಿನ ಜನಪ್ರತಿನಿಧಿಗಳು ರೈತರ ಮನವೊಲಿಸಿ ವಿಮಾನ ನಿಲ್ದಾಣದ ಉದ್ಘಾಟನೆ ಮಾಡಿದ್ದರು.
ಆದರೆ, ಈ ಭಾಗದ ರೈತರು ನಿವೇಶನಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದಾಗ ಕೋರ್ಟ್, ಭೂಮಿ ಕಳೆದುಕೊಂಡ ರೈತರಿಗೆ ನಿವೇಶನ ನೀಡುವಂತೆ ಜಿಲ್ಲಾಡಳಿತಕ್ಕೆ ಆದೇಶ ಮಾಡಿತ್ತು. ಆದರೆ, ನಿವೇಶನದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ರೈತರನ್ನು ವಸತಿ ಸಚಿವರಿಗೆ ಭೇಟಿ ಮಾಡಿಸಿದಾಗ ಅವರು ಕೆಹೆಚ್ಬಿಯಿಂದ ನಿವೇಶನ ನೀಡಬೇಕಾದರೆ ನಮಗೆ ಭೂಮಿ ನೀಡಿ, ಇಲ್ಲವೇ, 32 ಕೋಟಿ ರೂ ಹಣ ನೀಡಿ ಎಂದು ಹೇಳಿದ್ದರು. ಈಗ ರಾಜ್ಯ ಸರ್ಕಾರ ಹಣ ನೀಡಿದರೆ ರೈತರಿಗೆ ನಿವೇಶನ ಲಭ್ಯವಾಗುತ್ತದೆ. ಹೀಗಾಗಿ, ರೈತರು ತಮಗೆ ನಿವೇಶನ ನೀಡಬೇಕು ಎಂದು ವಿಮಾನ ನಿಲ್ದಾಣದ ಮುಂಭಾಗ ತಮ್ಮ ಟ್ರ್ಯಾಕ್ಟರ್ನೊಂದಿಗೆ ಹೋರಾಟ ಪ್ರಾರಂಭಿಸಿದ್ದಾರೆ.
ಅನಿರ್ದಿಷ್ಟಾವಧಿ ಪ್ರತಿಭಟನೆ ಕುರಿತು ಭೂಮಿ ಕಳೆದುಕೊಂಡ ರೈತ ಮಹಿಳೆ ಅಂಬಿಕಾ ಅವರು ಮಾತನಾಡಿ, ‘ಹಿಂದೆ ಭೂಮಿ ನೀಡುವಾಗ ರಾಜ್ಯ ಸರ್ಕಾರ ನಮಗೆ ನಿವೇಶನ ನೀಡುವುದಾಗಿ ಹೇಳಿತ್ತು. ಈಗ ಹೈಕೊರ್ಟ್ ಸಹ ನಿವೇಶನ ನೀಡಬೇಕು ಎಂದು ಹೇಳಿದೆ. ಆದರೆ, ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ನಮ್ಮ 6 ಎಕರೆ ಭೂಮಿ ಹಾಗೂ ಎರಡು ಮನೆಯನ್ನು ವಿಮಾನ ನಿಲ್ದಾಣಕ್ಕೆ ನೀಡಲಾಗಿದೆ. ನಮಗೆ ಹಿಂದಿನ ಸರ್ಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಹಿಂದೆಯೇ ಸಂಸದರು ನಮಗೆ ನಿವೇಶನ ಕೊಡಿಸುವುದಾಗಿ ಹೇಳಿದ್ದರು. ಆದರೆ, ಈಗ ಯಾರೂ ಸಹ ನಮ್ಮ ನಿವೇಶನದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದಾಗಿ ನಾವು ಇಂದಿನಿಂದ ನಮ್ಮ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದೇವೆ. ನ್ಯಾಯ ಸಿಗುವವರೆಗೂ ನಮ್ಮ ಧರಣಿ ಮುಂದುವರೆಯುತ್ತದೆ’ ಎಂದು ತಿಳಿಸಿದ್ದಾರೆ.