ಬೆಂಗಳೂರು: ಸಿಲಿಕಾನ್ ಸಿಟಿಗೆ ಈ ಬಾರಿಯೂ ನೀರಿನ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಏಕೆಂದರೆ, ಅಂತರ್ಜಲ ಕೈ ಕೊಟ್ಟಿದ್ದು, ಪಾಲಿಕೆ ಕೊರೆಯಿಸಿದ ಬೋರ್ ವೆಲ್ ಗಳಲ್ಲಿ ನೀರಿಲ್ಲ.
ಪಾಲಿಕೆ ವ್ಯಾಪ್ತಿಯಲ್ಲಿನ ಬರೋಬ್ಬರಿ 12 ಸಾವಿರಕ್ಕೂ ಅಧಿಕ ಬೋರ್ ವೆಲ್ ಗಳಲ್ಲಿ ನೀರಿಲ್ಲ. ಹೀಗಾಗಿ ಇಂತಹ ಬೋರ್ ವೆಲ್ ಗಳನ್ನು ಬಿಬಿಎಂಪಿ ಜಲಮಂಡಳಿಗೆ ಹಸ್ತಾಂತರ ಮಾಡಿ ಕೈತೊಳೆದುಕೊಂಡಿದೆ.
ಪಾಲಿಕೆ ಬಳಿ ಇದ್ದ ಬರೋಬ್ಬರಿ 14 ಸಾವಿರಕ್ಕೂ ಅಧಿಕ ಬೋರ್ ವೆಲ್ ಗಳು BWSSBಗೆ ಹಸ್ತಾಂತರವಾಗಿವೆ. ಪ್ರತಿ ವರ್ಷ ಬೋರ್ ವೆಲ್ ನಿರ್ವಹಣೆ, ಅಂತರ್ಜಲ ಮಟ್ಟ ಏರಿಕೆಗೆ ಪಾಲಿಕೆ ಮೀಸಲಿಟ್ಟ ಕೋಟಿ ಕೋಟಿ ಹಣ ಖೋತ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ನಿರ್ವಹಣೆ ಕಷ್ಟ ಎಂಬ ಕಾರಣಕ್ಕೆ ಜಲ ಮಂಡಳಿಗೆ ಹಸ್ತಾಂತರಿಸಲಾಗಿದೆ.
ಆದರೆ, ಅತ್ತ ನೀರೂ ಇಲ್ಲ, ಇತ್ತ ನಿರ್ವಹಣೆ ಹೊಣೆಯಿಂದಾಗಿ ಜಲಮಂಡಳಿಗೆ ಹೊರೆಯಾಗುತ್ತಿದೆ. ಪಾಲಿಕೆ ಹಸ್ತಾಂತರ ಮಾಡಿದ ಬೋರ್ ವೆಲ್ ಗಳು ನೀರಿಲ್ಲದೇ, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತನ್ನದಲ್ಲದ ತಪ್ಪಿಗೆ ಜಲಮಂಡಳಿ ಜನರ ಕಡೆಯಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದೆ.