ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿದೆ.
57 ಕೆಜಿ ಕುಸ್ತಿ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಮನ್ ಸೆಹ್ರಾವತ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಅಮನ್ ಸೆಹ್ರಾವತ್ ತಮ್ಮ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಲ್ಬೇನಿಯನ್ ಕುಸ್ತಿಪಟುವನ್ನು 12-0 ಅಂತರದಿಂದ ಸೋಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಈ ಗೆಲುವಿನೊಂದಿಗೆ ಅಮನ್ ಈಗ ಪದಕಕ್ಕೆ ಒಂದು ಹೆಜ್ಜೆ ಹಿಂದೆ ಇದ್ದಾರೆ. ಸೆಮಿಫೈನಲ್ ಪಂದ್ಯ ಕೂಡ ಇಂದು ರಾತ್ರಿ 9.45ಕ್ಕೆ ಜರುಗಲಿದೆ. ಈ ಪಂದ್ಯದಲ್ಲಿ ಅಮನ್ ಸೆಹ್ರಾವತ್ ಗೆದ್ದು, ಫೈನಲ್ ತಲುಪಿದರೆ ಅವರಿಗೆ ಬೆಳ್ಳಿ ಪದಕ ಖಚಿತವಾಗಲಿದೆ.
ಒಂದು ವೇಳೆ ಫೈನಲ್ ಪಂದ್ಯದಲ್ಲಿ ಗೆದ್ದರೆ ಚಿನ್ನಕ್ಕೆ ಕೊರಳೊಡ್ಡಲಿದ್ದಾರೆ. ಇದು ಸಾಧ್ಯವಾದರೆ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಭಾರತದ ಪರ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎನಿಸಿಕೊಳ್ಳಲಿದ್ದಾರೆ. ಇವರ ಫೈನಲ್ ಪಂದ್ಯಕ್ಕೂ ಮುನ್ನ ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಫೈನಲ್ ಪಂದ್ಯದಲ್ಲಿ ಸೆಣಸಾಟ ನಡೆಸಲಿದ್ದಾರೆ. ಇಂದು ರಾತ್ರಿ ನಡೆಯುವ ಪಂದ್ಯದಲ್ಲಿ ನೀರಜ್ ಚೋಪ್ರಾ ಚಿನ್ನಕ್ಕಾಗಿ ಗುರಿ ಇಡಲಿದ್ದಾರೆ.