26 ಪ್ರವಾಸಿಗರಿಗೆ ಮರಣ ಶಾಸನ ಬರೆದದ್ದೇ ಪಾಕಿಸ್ಥಾನದ ಸೇನೆ. ಯೆಸ್! ಇಂಥದ್ದೊಂದು ಕಠೋರ ಸತ್ಯವೀಗ ಬಟಾ ಬಯಲಾಗಿದೆ. ಪಹಲ್ಗಾಮ್ ಹತ್ಯಾಕಾಂಡದ ಮಾಸ್ಟರ್ ಮೈಂಡ್ ಬೇರ್ಯಾರೂ ಅಲ್ಲ ಅದು ಖುದ್ದು ಪಾಕ್ ಸೇನೆ ಮತ್ತು ಐಎಸ್ ಐ. ಲಷ್ಕರ್ ಉಗ್ರರೊಟ್ಟಿಗೆ ಸೇರಿ ನರಮೇಧಕ್ಕೆ ಅಂತಿಮ ಸ್ವರೂಪ ನೀಡಿದ್ದೇ ಪಾಕ್ ಆರ್ಮಿ ಹಾಗೂ ಐಎಸ್ ಐ ಅಧಿಕಾರಿಗಳು.
ಹಸೀಮ್ ಮೂಸಾ ಮಾಸ್ಟರ್ ಮೈಂಡ್
ಪಹಲ್ಗಾಮ್ ನಲ್ಲಿ ನೆತ್ತರೋಕುಳಿ ಆಡಿದ ಉಗ್ರರ ರೇಖಾ ಚಿತ್ರಗಳನ್ನು ಬಿಡುಗಡೆ ಮಾಡಿರುವ ಎನ್ ಐಎ ಸುಳಿವು ನೀಡಿದವರಿಗೆ 20 ಲಕ್ಷದ ಇನಾಮು ಘೋಷಿಸಿದ್ದಾರೆ. ಆದರೀಗ ಈ ಪ್ರಕರಣಕ್ಕೆ ಮತ್ತೊಂದು ಮೆಗಾ ಟ್ವಿಸ್ಟ್ ಸಿಕ್ಕಿದೆ. ನೆತ್ತರೋಕುಳಿ ನಡೆಸುವ ಹೊಣೆ ಹೊತ್ತಿದ್ದು ಬೇರಾರು ಅಲ್ಲಾ, ಅದು ಹಸೀಮ್ ಮೂಸಾ. ಅಸಲಿಗೆ ಈ ಮೂಸಾ ಪಾಕಿಸ್ಥಾನದ ಸ್ಪೆಷಲ್ ಸರ್ವೀಸ್ ಗ್ರೂಪ್ ನ ಪ್ಯಾರಾ ಕಮಾಂಡರ್, ಪಾಕ್ ಸೇನೆಯ ಅವಿಭಾಜ್ಯ ಅಂಗವಾಗಿರುವ ಈ ಎಸ್ ಎಸ್ ಜಿಯ ಕಮಾಂಡರ್ ಆಗಿದ್ದ ಮೂಸಾಗೆ ಪಹಲ್ಗಾಮ್ ನಲ್ಲಿ ಕಾಶ್ಮೀರೇತರರು ಹಾಗೂ ಭದ್ರತಾ ಪಡೆಗಳ ಸಿಬ್ಬಂದಿಯನ್ನು ಹತ್ಯೆಗೈಯ್ಯುವ ಸುಪಾರಿ ನೀಡಲಾಗಿತ್ತು.
ದಾಳಿ ಹಿಂದಿನ ಕೈಗಳಿಗಳ ಬೆನ್ನುಬಿದ್ದು ರಣಬೇಟೆ
ಮೂಸಾನ ಪಾತ್ರ ಮತ್ತು ಪಾಕ್ ಸೇನೆಯೊಟ್ಟಿಗೆ ಐಎಸ್ಐ ಸೇರಿ ರೂಪಿಸಿದ ಹತ್ಯಾಕಾಂಡಕ್ಕೀಗ ಸಾಕ್ಷ್ಯ ಲಭ್ಯವಾಗಿದೆ. ಪ್ಯಾರಾ ಕಮಾಂಡರ್ ಓರ್ವನಿಗೆ ಹತ್ಯೆಯ ಸುಪಾರಿ ಕೊಟ್ಟ ಪಾಕಿಸ್ಥಾನದ ನಿಜ ಬಣ್ಣವೀಗ ಬಯಲಾಗಿದೆ. ಇನ್ನೊಂದೆಡೆ, ಮೂಸಾ ಅಂಡ್ ಗ್ಯಾಂಗ್ ಗಾಗಿ ಕಣಿವೆಯಲ್ಲಿ ರಣಬೇಟೆ ಮುಂದುವರಿದೆ. ಇತ್ತ ಗಡಿಯಲ್ಲಿ ಪಾಕಿಸ್ತಾನದ ಫೈರಿಂಗ್ ಮುಂದುವರಿದಿದ್ದು, ಭಾರತದಿಂದಲೂ ತಕ್ಕ ತಿರುಗೇಟು ನೀಡಲಾಗುತ್ತಿದೆ. ಒಟ್ಟಿನಲ್ಲಿ ತನ್ನ ಪಾತ್ರವಿಲ್ಲ ಅಂತಾ ಬೊಬ್ಬೆ ಹೊಡೆಯುತ್ತಿದ್ದ ಪಾಕಿಸ್ತಾನದ ಗೋಸುಂಬೆ ಆಟ ಈಗ ಅನಾವರಣವಾಗಿದೆ.