ಹೊಸದಿಲ್ಲಿ: ಭಾರತ-ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ವಿರಾಮ ಘೋಷಿಸಿದರೂ ಆತಂಕದ ವಾತಾವರಣ ಮುಂದುವರಿದಿದೆ. ಅದರಲ್ಲೂ, ಭಾರತದ ಜತೆಗಿನ ಸಂಘರ್ಷದ ವೇಳೆ ಪಾಕಿಸ್ತಾನಕ್ಕೆ ಟರ್ಕಿ ಬೆಂಬಲ ಸೂಚಿಸಿರುವುದು, ಶಸ್ತ್ರಾಸ್ತ್ರಗಳನ್ನು ಪೂರೈಸಿರುವುದು ಭಾರತ ಆತಂಕಪಡುವ ಸಂಗತಿಯಾಗಿದೆ. ಭಾರತದ 30-36 ಪ್ರದೇಶಗಳಲ್ಲಿಪಾಕಿಸ್ತಾನದ 300-400 ಡ್ರೋನ್ ಗಳು ದಾಳಿ ಮಾಡಲು ಯತ್ನಿಸಿವೆ. ಇವುಗಳನ್ನು ಭಾರತೀಯ ಸೇನೆಯು ಸಮರ್ಥವಾಗಿ ಹೊಡೆದುರುಳಿಸಿದೆ.
ಆದರೆ, ಡ್ರೋನ್ ಅವಶೇಷಗಳನ್ನು ಪತ್ತೆಹಚ್ಚಿ ಪರಿಶೀಲಿಸಿದಾಗ, ಅವು ಟರ್ಕಿ ತಯಾರಿಸಿದ ಡ್ರೋನ್ಗಳು ಎಂಬುದು ಗೊತ್ತಾಗಿದೆ. ಅದರಲ್ಲೂ, ಟರ್ಕಿಯ ಆಸಿಸ್ ಗಾರ್ಡ್ ಸೊಂಗರ್, ಬಯ್ರಾಕ್ತರ್ ಡ್ರೋನ್ಗಳು ಪತ್ತೆಯಾಗಿದ್ದು, ಭಾರತದ ವಿರುದ್ಧ ಪಾಕ್ ಹೋರಾಡಲು ಶಸ್ತ್ರಾಸ್ತ್ರಗಳನ್ನು ಪೂರೈಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪಾಕಿಸ್ತಾನದ 11 ಉಗ್ರರ ನೆಲೆಗಳ ಮೇಲೆ ಭಾರತವು ವಾಯುದಾಳಿ ಮಾಡಿದ ಬಳಿಕ ಮೊದಲು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರು ಪಾಕ್ ಪರ ನಿಂತರು. ಅಲ್ಲದೆ, ಪಾಕಿಸ್ತಾನಕ್ಕೇ ತೆರಳಿ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿಯಾದರು. ಟರ್ಕಿಯ ಆರು ಮಿಲಿಟರಿ ವಿಮಾನಗಳಲ್ಲಿಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ, ಯುದ್ಧ ಸಲಕರಣೆಗಳನ್ನು ಪೂರೈಸಲಾಗಿದೆ ಎಂಬ ಮಾತುಗಳು ಕೇಳಿಬಂದವು. ಇದರೊಂದಿಗೆ, ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರತದ ಪರವಾಗಿ ನಿಂತರೆ, ಟರ್ಕಿ ಮಾತ್ರ ಪಾಕಿಸ್ತಾನದ ಪರ ನಿಂತಿತು. ಭಾರತದ ಜತೆಗೆ ವಾಣಿಜ್ಯಿಕ, ರಾಜತಾಂತ್ರಿಕ ಸಂಬಂಧ ಹೊಂದಿರುವ ಟರ್ಕಿಯು ಈಗ ಬಹಿರಂಗವಾಗಿಯೇ ಪಾಕ್ ಜತೆ ನಿಂತಿರುವುದು ಸಹಜವಾಗಿಯೇ ಆತಂಕ ಮೂಡಿಸಿದೆ.
ಪಾಕ್ ಗೆ ಏಕೆ ಬೆಂಬಲ?
ರೆಸೆಪ್ ತಯ್ಯಿಪ್ ಎರ್ಡೋಗನ್ ಅವರು ಟರ್ಕಿ ರಾಜಕಾರಣದಲ್ಲಿಮುನ್ನಡೆ ಸಾಧಿಸಿದ ಬಳಿಕ (ಮೊದಲು ಪ್ರಧಾನಿ, 2014ರಿಂದ ಅಧ್ಯಕ್ಷ) ಪಾಕ್ ಗೆ ಬೆಂಬಲ ನೀಡುತ್ತಿದ್ದಾರೆ. ಕಾಶ್ಮೀರ, ಭಾರತ-ಪಾಕ್ ಬಿಕ್ಕಟ್ಟು ಸೇರಿ ಹಲವು ವಿಷಯಗಳಲ್ಲಿಎರ್ಡೋಗನ್ ಪಾಕಿಸ್ತಾನಕ್ಕೇ ಬೆಂಬಲ ಸೂಚಿಸುತ್ತಿದ್ದಾರೆ. ಜಾಗತಿಕ ಇಸ್ಲಾಮಿಕ್ ದೇಶಗಳಿಗೆ ಟರ್ಕಿ ನಾಯಕತ್ವ ವಹಿಸಬೇಕು ಎಂಬುದು ಎರ್ಡೋಗನ್ ಉದ್ದೇಶವಾಗಿದೆ. ಅಲ್ಲದೆ, ಪಾಕ್ ಇಸ್ಲಾಮಿಕ್ ದೇಶವಾಗಿರುವ ಕಾರಣ ಬೆಂಬಲ ನೀಡಲು ಕಾರಣವಾಗಿದೆ. ಆದಾಗ್ಯೂ, ಚೀನಾದ ಕೃಪಾಕಟಾಕ್ಷದಿಂದ ಟರ್ಕಿ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. 2024ರಲ್ಲಿಪಾಕಿಸ್ತಾನವು ಟರ್ಕಿಯಿಂದ 145 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳನ್ನು ಖರೀದಿಸಿದೆ. ಬಯ್ರಾಕ್ತರ್ ಟಿಬಿ 2, ಅಕಿನ್ಸಿ ಡ್ರೋನ್ಗಳನ್ನು ಖರೀದಿಸಿದೆ. ರಕ್ಷಣಾ ವ್ಯಾಪಾರ ಸಹಭಾಗಿತ್ವ ಸಾಧಿಸಲಾಗಿದೆ. ಇದೇ ಕಾರಣಕ್ಕಾಗಿ ಪಾಕ್ ಗೆ ಟರ್ಕಿ ಬೆಂಬಲ ನೀಡುತ್ತಿದೆ ಎಂದು ತಿಳಿದುಬಂದಿದೆ.