ಮೈಸೂರು: ಭಾರತೀಯ ಅಂಚೆ ಇಲಾಖೆ (Department of Post) ಈಗ ಡಿಜಿಟಲೀಕರಣವಾಗುತ್ತಿದೆ. ಹಲವಾರು ಸವಾಲು ಹಾಗೂ ಸ್ಪರ್ಧೆಗೆ ತನ್ನನ್ನು ತಾನೂ ಒಗ್ಗೂಡಿಸಿಕೊಳ್ಳುತ್ತಿದೆ. ಈಗ ಅಂಚೆ ಇಲಾಖೆಯ ಹಲವು ಸೇವೆಗಳು ಆನ್ ಲೈನ್ ನಲ್ಲಿ (Online) ಸಿಗಲಿದ್ದು, ಈಗ ಪ್ರಾಯೋಗಿಕ ಹಂತ ಆರಂಭವಾಗಿದೆ.
ಈ ಪ್ರಾಯೋಗಿಕ ಕಾರ್ಯಕ್ಕೆ ಕರ್ನಾಟಕದಲ್ಲಿ ಮೈಸೂರು ಹಾಗೂ ಬಾಗಲಕೋಟೆ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ. ಇಲಾಖೆ ಅಡ್ವಾನ್ಸ್ಡ್ ಪೋಸ್ಟಲ್ ಟೆಕ್ನಾಲಜಿ ತಂತ್ರಾಂಶವೊಂದನ್ನು ಸಿದ್ಧಪಡಿಸಿದ್ದು, ಆ ಮೂಲಕ ಸರಕು, ಪತ್ರಗಳ ಸಾಗಾಟ ಸೇರಿದಂತೆ ಇನ್ನಿತರ ಸೇವೆಗಳನ್ನು ಆನ್ ಲೈನ್ ಸೂರಿನಡಿ ತರಲು ಯತ್ನಿಸಲಾಗುತ್ತಿದೆ. ಮೈಸೂರು ವಿಭಾಗ ಹಾಗೂ ಬಾಗಲಕೋಟೆ ವಿಭಾಗಗಳು ಪ್ರಾಯೋಗಿಕವಾಗಿ ಸೌಲಭ್ಯ ಒದಗಿಸಲು ಆಯ್ಕೆಯಾಗಿವೆ. ಇದರ ಯಶಸ್ಸಿನ ನಂತರ ಈ ಸೇವೆಯನ್ನು ಕರ್ನಾಟಕದಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ.
ಗ್ರಾಹಕರು ಅಂಚೆ ಮೂಲಕ ವಸ್ತು, ಸರಕು ಸೇರಿದಂತೆ ಒದಗಿಸಿದ ಸೇವೆಯನ್ನು ಆನ್ ಲೈನ್ ಮೂಲಕ ಬುಕ್ ಮಾಡಬಹುದು. ಬುಕ್ ಮಾಡಿದ ನಂತರ ಪೋಸ್ಟ್ಮನ್ ಮನೆಗೆ ಬಂದು ಪಾರ್ಸೆಲ್ ಪಡೆಯುತ್ತಾರೆ. ಪಾರ್ಸಲ್ ಕಳುಹಿಸಿದ ನಂತರ ಗ್ರಾಹಕರಿಗೆ ಮಾಹಿತಿ ದೊರೆಯುತ್ತದೆ. ಆನಂತರ ಅದನ್ನು ಸಂಬಂಧಿಸಿದ ಗ್ರಾಹಕರಿಗೆ ತಲುಪಿಸಲಾಗುತ್ತದೆ. ಈ ಪ್ರಾಯೋಗಿಕ ಕಾರ್ಯವನ್ನು ಜೂನ್ 17 ರಿಂದ ಜಾರಿಗೊಳಿಸಲಾಗುತ್ತಿದೆ.