ಬೆಂಗಳೂರು: ಕೇಂದ್ರ ಸರ್ಕಾರವು 10 ವರ್ಷಗಳ ಹಿಂದೆ ಜಾರಿಗೆ ತಂದ ಅಟಲ್ ಪಿಂಚಣಿ ಯೋಜನೆಯು ಹೊಸ ದಾಖಲೆ ಬರೆದಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ 60 ವರ್ಷಗಳ ಬಳಿಕ ಪಿಂಚಣಿ ಭದ್ರತೆ ನೀಡುವ ಯೋಜನೆ ಇದಾಗಿದ್ದು, ಯೋಜನೆಗೆ ಇದುವರೆಗೆ ನೋಂದಣಿ ಮಾಡಿಕೊಂಡವರ ಸಂಖ್ಯೆ 8 ಕೋಟಿ ದಾಟಿದೆ. ಇದರ ಕುರಿತು ಕೇಂದ್ರ ಸರ್ಕಾರವೇ ಮಾಹಿತಿ ನೀಡಿದೆ. ಹಾಗಾದರೆ, ಏನಿದು ಯೋಜನೆ? ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂಬುದರ ಮಾಹಿತಿ ಇಲ್ಲಿದೆ.
2015ರ ಮೇ 9ರಂದು ಕೇಂದ್ರ ಸರ್ಕಾರವು ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಕೋಟ್ಯಂತರ ಅಸಂಘಟಿತ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಜೀವನಾಧಾರವಾಗಲಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA)ವು ಯೋಜನೆಯನ್ನು ನಿರ್ವಹಿಸುತ್ತದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿ ನಿರ್ವಹಿಸಲಾಗುತ್ತದೆ. 60 ವರ್ಷದಿಂದ ಜೀವತಾವಧಿವರೆಗೂ 1,000 ರಿಂದ 5,000 ರೂ.ವರೆಗೆ ಪಿಂಚಣಿ ಸೌಲಭ್ಯ ಸಿಗಲಿದೆ.
ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ 1 ಸಾವಿರ ರೂ.ನಿಂದ 5 ಸಾವಿರ ರೂಪಾಯಿವರೆಗೆ ಮಾಸಿಕ ಪಿಂಚಣಿ ದೊರೆಯುತ್ತದೆ. ನೀವು ಮಾಸಿಕ ಪಿಂಚಣಿ ಪಡೆಯಲು 18ನೇ ವಯಸ್ಸಿನ ಕಾರ್ಮಿಕರಾದರೆ ತಿಂಗಳಿಗೆ 42 ರಿಂದ 210 ರೂ. ಪ್ರೀಮಿಯಂ ಭರಿಸಬೇಕು. ನೀವು 40ನೇ ವಯಸ್ಸಿನವರಾದರೆ ತಿಂಗಳಿಗೆ 291 ರಿಂದ 1,454 ರೂ. ಭರಿಸಬೇಕು. ಮಾಸಿಕ, ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕವಾಗಿ ಪ್ರೀಮಿಯಂ ಪಾವತಿ ಮಾಡಬಹುದು. ಕನಿಷ್ಠ 20 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ಕೊಡುಗೆ ಇದಾಗಿದೆ. 60 ವರ್ಷ ವಯಸ್ಸಿನಲ್ಲಿ ಅವರ ಕೊಡುಗೆಗಳ ಆಧಾರದ ಮೇಲೆ ತಿಂಗಳಿಗೆ ಐದು ಸಾವಿರ ರೂಪಾಯಿವರೆಗೆ ಪಿಂಚಣಿ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸೋದು ಹೇಗೆ?
ಅಟಲ್ ಪಿಂಚಣಿ ಯೋಜನೆಯನ್ನು ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಬ್ಯಾಂಕ್ ಖಾತೆ ಅಥವಾ ಪೋಸ್ಟ್ ಆಫೀಸ್ ಅಕೌಂಟ್ ಇದ್ದರೆ ಸಾಕು. ನೀವು 1,000 ರೂ. ನಿಂದ 5,000 ರೂವರೆಗೆ ಐದು ರೀತಿಯ ಪ್ರೀಮಿಯಂಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಅದಕ್ಕೆ ಅನುಗುಣವಾಗಿ ಪ್ರೀಮಿಯಂ ನಿಗದಿ ಮಾಡಲಾಗುತ್ತದೆ. ಬ್ಯಾಂಕ್ ಖಾತೆಯಿಂದ ಆಟೋಡೆಬಿಟ್ ಮೂಲಕವೂ ತಾನೇ ಕಡಿತವಾಗುತ್ತದೆ. https://enps.nsdl.com/eNPS/ApySubRegistration.html ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.