ಚಾಮರಾಜನಗರ : ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಹುಲಿ ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಪಚ್ಚಮಲ್ಲ ಅಲಿಯಾಸ್ ಸಣ್ಣ ಬಂಧಿತ ಆರೋಪಿಯಾಗಿದ್ದು, ಈತ ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ನಿವಾಸಿ ಎಂಬುದು ಗೊತ್ತಾಗಿದೆ.
ಸದ್ಯ ಘಟನೆ ಸಂಬಂಧ ಪಚ್ಚಮಲ್ಲನ ಜೊತೆ ಆತನ ನಾಲ್ವರು ಸಹಚರರನ್ನೂ ವಶಕ್ಕೆ ಪಡೆಯಲಾಗಿದೆ. ಗಣೇಶ್, ಗೋವಿಂದೇಗೌಡ, ಮಂದೆಕುರಿ ಮೇಯಿಸುತ್ತಿದ್ದ ಮಂಜುನಾಥ್ ಹಾಗೂ ಕಂಬಣ್ಣ ಸದ್ಯ ಅರಣ್ಯಾಧಿಕಾರಿಗಳ ವಶದಲ್ಲಿದ್ದಾರೆ.
ಹುಲಿ ಕೊಂದಿದ್ದು ಯಾಕೆ? ಪಚ್ಚಮಲ್ಲನ ಹಸುವನ್ನ ಹುಲಿ ಬೇಟೆಯಾಡಿ ಕೊಂದಿತ್ತು. ತಾನು ಸಾಕಿದ ಹಸುವನ್ನ ಕೊಂದಿದ್ದಕ್ಕೆ ರೊಚ್ಚಿಗೆದ್ದಿದ್ದ ಆರೋಪಿ, ಹುಲಿಗೆ ಒಂದುಗತಿ ಕಾಣಿಸಲೇಬೇಕೆಂದು ಸ್ಕೆಚ್ ಹಾಕಿ ಗೋವಿಂದೇಗೌಡ, ಮಂಜುನಾಥ್, ಕಂಬಣ್ಣ, ಗಣೇಶನ ಜೊತೆ ಸೇರಿ ಸಂಚು ಮಾಡಿದ್ದ. ಅದರಂತೆ ಹುಲಿಗೆ ಮಾಂಸದಲ್ಲಿ ವಿಷ ಹಾಕಿ ಕೊಲ್ಲಲಾಗಿದೆ. ಬಳಿಕ ರಕ್ಕಸರು ಕೊಡಲಿಯಿಂದ ಹುಲಿಯನ್ನ 3 ಭಾಗಗಳಾಗಿ ತುಂಡರಿಸಿದ್ದರು ಎಂಬುದು ಗೊತ್ತಾಗಿದ್ದು, ಸದ್ಯ ಆರೋಪಿಗಳನ್ನ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.


















