ದಾವಣಗೆರೆ: ಜಿಲ್ಲೆಯ ದಾವಣಗೆರೆ ತಾಲೂಕಿನ ಹಳೇ ಕಡ್ಲೆಬಾಳು ಶಾಲೆಯ ಶಿಕ್ಷಕ ಹೃದಯಾಘಾತಕ್ಕೆ ತುತ್ತಾಗಿ ಜಿಲ್ಲೆಯ ಖಾಸಗಿ ಆಸ್ಪತ್ರೆ ಸೇರಿದ್ದಾರೆ. ಪ್ರಕಾಶ್ ನಾಯಕ್ (44) ಎಂಬಾತ ಹೃದಯಾಘಾತಕ್ಕೆ ಒಳಗಾದ ಶಿಕ್ಷಕ.
ಸಮೀಕ್ಷೆ ಮಾಡುವ ವೇಳೆ ಹೃದಯಾಘಾತ ಆಗಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದ ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೆ, ಆಪರೇಷನ್ ಮಾಡಿದ ವೈದ್ಯರು ಸ್ಟಂಟ್ ಅಳವಡಿಕೆ ಮಾಡಿದ್ದಾರೆ.
ಸದ್ಯ ಶಿಕ್ಷಕ ಪ್ರಕಾಶ್ ನಾಯಕ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕಾಶ್ ನಾಯಕ್ ಅವರಿಗೆ ಜಿಲ್ಲಾಧಿಕಾರಿ ಡಾ. ಗಂಗಾಧರಸ್ವಾಮಿ ಜಿ. ಎಂ. ಅವರು ಫೋನ್ ಮೂಲಕ ಧೈರ್ಯ ತುಂಬಿದರು.
“ಚಿಂತಿಸಬೇಡಿ, ಹಣವನ್ನು ರಿಪ್ಲೇಸ್ಮೆಂಟ್ ಮಾಡಿಸುತ್ತೇನೆ, ಧೈರ್ಯದಿಂದ ಇರಿ, ಸ್ಟಂಟ್ ಹಾಕಿದ್ದಾರೆ, ಇನ್ನು ಮುಂದೆ ನೀವು ಹತ್ತು ಸಾವಿರ ಹೆಜ್ಜೆ ವಾಕ್ ಮಾಡ್ಬೇಕು, ಬರೋಬ್ಬರಿ 08 ಕಿಲೋ ಮೀಟರ್ ನಡೆಯಬೇಕು, ಆಗ 100 ವರ್ಷ ಬದುಕುತ್ತೀರಿ. ಹೆದರಬೇಡಿ ಸ್ಟಂಟ್ ಎಂದರೆ ಹೃದಯದಲ್ಲಿ ರಕ್ತ ಕಟ್ಟಿಕೊಂಡಿರುತ್ತದೆ, ಅದನ್ನು ವೈದ್ಯರು ಬಿಡಿಸಿರುತ್ತಾರೆ. ಇದೀಗ ಕೆಲಸ ಮಾಡಿದ್ದಕ್ಕೆ ಕಾಣಿಸಿಕೊಂಡಿದೆ, 6 ತಿಂಗಳಲ್ಲಿ ಸಿವಿಯರ್ ಆಗಿದ್ದರೆ, ಧೈರ್ಯವಾಗಿರಿ, ಮಾಂಸಹಾರ ತ್ಯಜಿಸಿ” ಎಂದು ಧೈರ್ಯ ತುಂಬಿದರು. ಈ ವೇಳೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದರು.