ಬೆಂಗಳೂರು: ಆರ್ ಸಿಬಿ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಮಾಜಿ ಪೊಲೀಸ್ ಕಮಿಷನರ್ ದಯಾನಂದ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೇಳಿಕೆ ದಾಖಲಿಸಿದ್ದಾರೆ.
ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ದಯಾನಂದ್ ಹೇಳಿಕೆ ದಾಖಲಿಸಿದ್ದಾರೆ. ದುರಂತದ ಬಗ್ಗೆ ಜಿಲ್ಲಾಧಿಕಾರಿ ಜಗದೀಶ್ ಮುಂದೆ 1 ಗಂಟೆಗಳ ಕಾಲ ಹೇಳಿಕೆ ನೀಡಿದ್ದಾರೆ. ವಿಚಾರಣೆವೇಳೆ ಉಚಿತ ಟಿಕೆಟ್ ಎಂದು ಘೋಷಣೆ ಮಾಡಿದ್ದರಿಂದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿದೆ ಎಂಬ ಮಾಹಿತಿ ಹೇಳಿದ್ದಾರೆ ಎಂಬುವುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಅಂದು ನಡೆದ ಘಟನೆಯನ್ನು ಜಿಲ್ಲಾಧಿಕಾರಿ ಎದುರು ಸಂಪೂರ್ಣವಾಗಿ ವಿವರಿಸಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ದಿನ 21 ಗೇಟ್ ಗಳಿಗೂ ನಾನೇ ಖುದ್ದಾಗಿ ಭೇಟಿ ನೀಡಿದ್ದೆ. ಸಂಪೂರ್ಣವಾಗಿ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು.
ಪ್ರತಿ ಬಾರಿ ಐಪಿಎಲ್ ಮ್ಯಾಚ್ ನಡೆಯುವಾಗ ಇರುವಷ್ಟು ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು. ಉಚಿತ ಟಿಕೆಟ್ ಎಂದು ಘೋಷಣೆ ಮಾಡಿದ್ದರಿಂದ ಕ್ರೌಡ್ ಜಾಸ್ತಿಯಾಗಿತ್ತು. ಜೊತೆಗೆ ಗೇಟ್ ತೆಗೆಯಲು ತಡಮಾಡಿದ್ದರಿಂದ ಇಷ್ಟೆಲ್ಲ ಅವಾಂತರ ನಡೆದಿದೆ ಎಂದು ಹೇಳಿಕೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಲ್ತುಳಿತ ಸಂಬಂಧ ಇಲ್ಲಿಯವರೆಗೆ 140 ಮಂದಿ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ವಾರ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆಯಾಗುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.