ಪ್ಯಾರಿಸ್ ಒಲಿಂಪಿಕ್ಸ್ ಗೆ ನಾಳೆಯಿಂದ ಅಧಿಕೃತ ಚಾಲನೆ ಸಿಗಲಿದೆ. ಈ ಮಧ್ಯೆ ಈಗಾಗಲೇ ಕೆಲವು ಕ್ರೀಡೆಗಳು ಆರಂಭವಾಗಿದ್ದು, 206 ದೇಶಗಳ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಭಾರತೀಯರು ಕೂಡ ಪದಕ ಬೇಟೆ ಆರಂಭಿಸಿದ್ದಾರೆ.
ಭಾರತದಿಂದ 117 ಸ್ಪರ್ಧಿಗಳಿದ್ದಾರೆ. ಇವರಲ್ಲಿ ಬಹುತೇಕರು ಹೊಸಬರು ಎಂಬುದು ವಿಶೇಷ. 72 ಭಾರತೀಯರು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿದ್ದಾರೆ. ಭಾರತೀಯ ಕ್ರೀಡಾಪಟುಗಳು ಈ ಬಾರಿ ಒಟ್ಟು 69 ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಪೈಕಿ 10 ಪದಕಗಳು ಸಿಗುವುದು ಬಹುತೇಕ ಖಚಿತ ಎಂಬ ಅನಿಸಿಕೆ ಇದೆ.
ಹಿಂದಿನ ಪ್ರದರ್ಶನವನ್ನು ಗಣನೆಗೆ ತೆಗೆದುಕೊಂಡರೆ, ಈ ಬಾರಿ ಕೂಡ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ. ಹೀಗಾಗಿ ಈ ಬಾರಿ ಭಾರತೀಯರು ಪದಕ ಬೇಟೆಯಲ್ಲಿ ದಾಖಲೆ ಬರೆಯುವ ಸಾಧ್ಯತೆ ಇದೆ. ನೀರಜ್ ಚೋಪ್ರಾ 2020ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಹೀಗಾಗಿ ಈ ಬಾರಿ ಕೂಡ ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಕಡೆಯಿಂದ ಪದಕ ನಿರೀಕ್ಷಿಸಲಾಗಿದೆ.

2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಪ್ಯಾರಿಸ್‌ನಲ್ಲಿ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಈ ಬಾರಿಯೂ ಪದಕ ನಿರೀಕ್ಷೆ ಇದೆ. ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಸಿಫ್ಟ್ ಕೌರ್ ಸಮ್ರಾ 469.6 ಪಾಯಿಂಟ್‌ಗಳ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು. 2023ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದ ಚೀನಾದ ಜಾಂಗ್ ಕಿಯೊಂಗ್ಯು ರನ್ನು ಸೋಲಿಸಿದ್ದರು.
ಮಹಿಳಾ ಬಾಕ್ಸಿಂಗ್ನಲ್ಲಿ ನಿಖಾತ್ ಝರೀನ್ ಅವರಿಂದ ಪದಕ ನಿರೀಕ್ಷಿಸಬಹುದು. ಏಕೆಂದರೆ 50 ಕೆ.ಜಿ ವಿಭಾಗದ ಮಹಿಳಾ ಬಾಕ್ಸಿಂಗ್ನಲ್ಲಿ ಅವರು ಹಾಲಿ ವಿಶ್ವ ಚಾಂಪಿಯನ್. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಟೊಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದ ಲೊವ್ಲಿನಾ ಕಡೆಯಿಂದಲೂ ಈ ಬಾರಿ ಪದಕ ನಿರೀಕ್ಷಿಸಬಹುದು. ಮಹಿಳಾ ಬಾಕ್ಸಿಂಗ್ ವಿಭಾಗದಿಂದ ಈ ಬಾರಿ ಎರಡು ಪದಕಗಳ ನಿರೀಕ್ಷೆಯಿದೆ.

2022ರಲ್ಲಿ ಐತಿಹಾಸಿಕ ಥಾಮಸ್ ಕಪ್ ಗೆದ್ದಿದ್ದ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಈ ಬಾರಿ ಒಲಿಂಪಿಕ್ಸ್ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಈ ಜೋಡಿ ಈಗಾಗಲೇ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚು, ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದುಕೊಂಡಿದೆ.
ಒಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಭಾರತಕ್ಕೆ ಎರಡು ಪದಕಗಳನ್ನು ತಂದುಕೊಟ್ಟಿದ್ದಾರೆ. 2016 ರಲ್ಲಿ ರಿಯೊ ಬೆಳ್ಳಿ ಪದಕ ಗೆದ್ದಿದ್ದ ಸಿಂಧು, ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದರು. ಹೀಗಾಗಿ ಈ ಬಾರಿ ಚಿನ್ನದ ನಿರೀಕ್ಷೆಯಲ್ಲಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತೆಯಾಗಿರುವ ಅಂತಿಮ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲೂ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಮಹಿಳಾ ವಿಭಾಗದ ಕುಸ್ತಿಯಿಂದ ಒಂದು ಪದಕ ನಿರೀಕ್ಷೆ ಇದೆ. ಪ್ಯಾರಿಸ್ ಒಲಿಂಪಿಕ್ಸ್ ಟೆನ್ನಿಸ್ನಲ್ಲಿ ರೋಹನ್ ಬೋಪಣ್ಣ ಮತ್ತು ಎನ್. ಶ್ರೀರಾಮ್ ಬಾಲಾಜಿ ಜೊತೆಯಾಗಿ ಕಣಕ್ಕಿಳಿಯಲಿದ್ದಾರೆ. ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳಲಿರುವ ಈ ಜೋಡಿಯಿಂದ ಕೂಡ ಪದಕ ನಿರೀಕ್ಷೆ ಇದೆ.
ಟೊಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತೀಯ ಪುರುಷರ ಹಾಕಿ ತಂಡವು 41 ವರ್ಷಗಳ ಪದಕದ ಬರ ನೀಗಿಸಿದ್ದರು. ಈಗ ಅದೇ ಉತ್ಸಾಹದಲ್ಲಿ ಪ್ಯಾರೀಸ್ ಒಲಿಂಪಿಕ್ಸ್ ಗೆ ಕಾಲಿಟ್ಟಿದ್ದಾರೆ.