ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಟ್ಟಿಯಲ್ಲಿ ಈಗ ದಕ್ಷಿಣ ಆಫ್ರಿಕಾ ಕೂಡ ಸ್ಥಾನ ಪಡೆದಿದೆ.
ಈ ಮೂಲಕ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಒಟ್ಟು 5 ತಂಡಗಳು ಫೈನಲ್ ತಲುಪುವ ಪಟ್ಟಿಯಲ್ಲಿ ಪೈಪೋಟಿ ನಡೆಸಿವೆ. ಪರ್ತ್ ಟೆಸ್ಟ್ ನಲ್ಲಿ ಆಸ್ಟ್ರೇಲಿಯವನ್ನು ಸೋಲಿಸುವ ಮೂಲಕ ಭಾರತ ತಂಡ ಮತ್ತೆ ಅಗ್ರ ಸ್ಥಾನಕ್ಕೆ ಏರಿದೆ.
ಆಸ್ಟ್ರೇಲಿಯಾಕ್ಕೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದ್ದು, ಮೊದಲ ಟೆಸ್ಟ್ ಸೋತಿರುವ ಕಾಂಗರೂ ಪಡೆ ಟಾಪ್-2ರಿಂದಲೂ ಹೊರಗುಳಿದಿದೆ. 5 ನೇ ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ ನೇರವಾಗಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ಫೈನಲ್ ರೇಸ್ ನಲ್ಲಿ ಆಫ್ರಿಕಾ ತಂಡಕ್ಕೆ ಭಾರಿ ಮುನ್ನಡೆ ಸಿಕ್ಕಿದೆ.
ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 233 ರನ್ ಗಳ ಜಯ ಸಾಧಿಸಿತ್ತು. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಎರಡನೇ ಸ್ಥಾನಕ್ಕೆ ಜಿಗಿದಿದೆ.
ದಕ್ಷಿಣ ಆಫ್ರಿಕಾ ಇಲ್ಲಿಯವರೆಗೆ ಆಡಿರುವ 9 ಪಂದ್ಯಗಳಲ್ಲಿ 5 ಗೆಲುವು ಮತ್ತು 3 ಸೋಲುಗಳೊಂದಿಗೆ ಶೇ. 59.25 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ ತಂಡ ಮೂರನೇ ಸ್ಥಾನಕ್ಕೆ ಜಾರಿದೆ. ಶ್ರೀಲಂಕಾ ತಂಡ 3ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಕುಸಿದಿದೆ.
ಭಾರತ ತಂಡ 15 ಪಂದ್ಯಗಳಲ್ಲಿ 9 ಗೆಲುವು ಶೇ. 61.11 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ಆಸ್ಟ್ರೇಲಿಯಾ ತಂಡ 13 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದೆ. ದಕ್ಷಿಣ ಆಫ್ರಿಕಾ ಈಗ ಭಾರತ ತಂಡವನ್ನು ಹಿಂದಿಕ್ಕುವ ಅವಕಾಶವನ್ನು ಹೊಂದಿದೆ.