ಸತಾರಾ (ಮಹಾರಾಷ್ಟ್ರ): ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಫಲ್ಟಾನ್ ಉಪ-ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದ 28 ವರ್ಷದ ಯುವತಿಯ ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಿದೆ. ಪ್ರಕರಣ ಸಂಬಂಧ ಬಂಧಿತನಾಗಿರುವ ಟೆಕ್ಕಿ ಪ್ರಶಾಂತ್ ಬಂಕಾರ್, “ವೈದ್ಯೆಯೇ ತನಗೆ ಕಿರುಕುಳ ನೀಡುತ್ತಿದ್ದಳು, ಮದುವೆಯಾಗುವಂತೆ ಮತ್ತು ದೈಹಿಕ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದಳು” ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಬೀಡ್ ಜಿಲ್ಲೆಯ ಮೂಲದವರಾದ ವೈದ್ಯೆ, ಫಲ್ಟಾನ್‌ನ ಹೋಟೆಲ್ ಕೋಣೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆತ್ಮಹತ್ಯೆಗೂ ಮುನ್ನ ಅವರು ತಮ್ಮ ಅಂಗೈ ಮೇಲೆ ಬರೆದ ಡೆತ್‌ನೋಟ್‌ನಲ್ಲಿ, ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಪಿಎಸ್‌ಐ) ಗೋಪಾಲ್ ಬಡಾನೆ ಮತ್ತು ಟೆಕ್ಕಿ ಪ್ರಶಾಂತ್ ಬಂಕಾರ್ ಅವರ ಹೆಸರುಗಳನ್ನು ಉಲ್ಲೇಖಿಸಿದ್ದರು. ಬಡಾನೆ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದರೆ, ಬಂಕಾರ್ ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ಅವರು ಆರೋಪಿಸಿದ್ದರು.
ಬಂಧಿತ ಟೆಕ್ಕಿಯ ಹೇಳಿಕೆ ಏನು?
ಬಂಧಿತ ಟೆಕ್ಕಿ ಪ್ರಶಾಂತ್ ಬಂಕಾರ್, ಮೃತ ವೈದ್ಯೆ ವಾಸವಿದ್ದ ಮನೆಯ ಮಾಲೀಕನ ಮಗನಾಗಿದ್ದಾನೆ. ಕಳೆದ ಒಂದು ವರ್ಷದಿಂದ ವೈದ್ಯೆ, ಬಂಕಾರ್ ಅವರ ಕುಟುಂಬದೊಂದಿಗೆ ತಿಂಗಳಿಗೆ 4,000 ರೂಪಾಯಿ ಬಾಡಿಗೆ ಪಾವತಿಸಿ ವಾಸವಾಗಿದ್ದರು. ಕಳೆದ ತಿಂಗಳು ತನಗೆ ಡೆಂಗ್ಯೂ ಬಂದಾಗ ವೈದ್ಯೆ ಚಿಕಿತ್ಸೆ ನೀಡಿದ್ದರು, ಆಗ ಇಬ್ಬರ ನಡುವೆ ಮೊಬೈಲ್ ಸಂಖ್ಯೆ ವಿನಿಮಯವಾಗಿತ್ತು ಎಂದು ಟೆಕ್ಕಿಯ ಸಹೋದರಿ ತಿಳಿಸಿದ್ದಾರೆ.
ಸುಮಾರು 15 ದಿನಗಳ ಹಿಂದೆ, ವೈದ್ಯೆ ಮದುವೆಯ ಪ್ರಸ್ತಾಪ ಮುಂದಿಟ್ಟಿದ್ದರು, ಆದರೆ ಅದನ್ನು ತನ್ನ ಸಹೋದರ ನಿರಾಕರಿಸಿದ್ದ. ತಾನೇನೂ ವೈದ್ಯೆಗೆ ಕರೆ ಮಾಡಿರಲಿಲ್ಲ, ಆಕೆಯೇ ಪದೇ ಪದೇ ಕರೆ ಮಾಡುತ್ತಿದ್ದಳು ಎಂದು ಬಂಕಾರ್‌ನ ಸಹೋದರ ಹೇಳಿದ್ದಾರೆ.
“ವೈದ್ಯೆಯು ತನಗೆ ಕಿರುಕುಳ ನೀಡುತ್ತಿದ್ದರು. ಮದುವೆಯಾಗುವಂತೆ ಮತ್ತು ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸುತ್ತಿದ್ದರು” ಎಂದು ಬಂಕಾರ್ ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ವೈದ್ಯೆಯ ಚಾಟ್‌ಗಳು ಮತ್ತು ಕಾಲ್ ರೆಕಾರ್ಡಿಂಗ್‌ಗಳನ್ನು ವಶಪಡಿಸಿಕೊಂಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಇಬ್ಬರು ಆರೋಪಿಗಳ ಬಂಧನ
ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಪಿಎಸ್‌ಐ ಗೋಪಾಲ್ ಬಡಾನೆ ಶನಿವಾರ ಸಂಜೆ ಫಲ್ಟಾನ್ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಟೆಕ್ಕಿ ಪ್ರಶಾಂತ್ ಬಂಕಾರ್‌ನನ್ನು ನ್ಯಾಯಾಲಯವು ಅಕ್ಟೋಬರ್ 28ರವರೆಗೆ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 64 (ಅತ್ಯಾಚಾರ) ಮತ್ತು 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇದನ್ನು ಓದಿ : ನಡುರಸ್ತೆಯಲ್ಲೇ ಬಾಲಕಿಗೆ ವೃದ್ಧನಿಂದ ಲೈಂಗಿಕ ಕಿರುಕುಳ | ಸಿಸಿ ಟಿವಿಯಲ್ಲಿ ದೃಶ್ಯ ಸೆರೆ



















