ಬೆಂಗಳೂರು: ಪೋಸ್ಟ್ ಆಫೀಸಿನ ಉಳಿತಾಯ ಯೋಜನೆಗಳ ಬಡ್ಡಿದರದ ಏರಿಕೆಯ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರಿಗೆ ನಿರಾಸೆಯಾಗಿದೆ. ಹೌದು, ಕೇಂದ್ರ ಸರ್ಕಾರವು 2025-26ನೇ ಹಣಕಾಸು ವರ್ಷದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದ ಅವಧಿಯಲ್ಲಿ ಪೋಸ್ಟ್ ಆಫೀಸಿನಲ್ಲಿ ಹೂಡಿಕೆ ಮಾಡುವ ಯೋಜನೆಗಳ ಮೇಲಿನ ಬಡ್ಡಿದರದಲ್ಲಿ (Small savings schemes Interest rates) ಯಾವುದೇ ಬದಲಾವಣೆ ಮಾಡಿಲ್ಲ.
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಸೇರಿ ಹಲವು ಯೋಜನೆಗಳಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರು ಹೆಚ್ಚು ಹೂಡಿಕೆ ಮಾಡುತ್ತಾರೆ. ಇವುಗಳಿಗೆ ಕೇಂದ್ರ ಸರ್ಕಾರದ ಬಲವೂ ಇರುವುದರಿಂದ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ, ಈ ಬಾರಿಯಾದರೂ ಕೇಂದ್ರ ಸರ್ಕಾರವು ಬಡ್ಡಿದರ ಹೆಚ್ಚಿಸುವ ನಿರೀಕ್ಷೆ ಇತ್ತು. ಆದರೆ, ಕೇಂದ್ರ ಸರ್ಕಾರವು ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಯಾವ ಯೋಜನೆಗೆ ಎಷ್ಟು ಬಡ್ಡಿ?
ಉಳಿತಾಯ ಖಾತೆ- 4%
5 ವರ್ಷಗಳ ಆರ್ ಡಿ- 6.7%
ಮಾಸಿಕ ಉಳಿತಾಯ ಯೋಜನೆ- 7.4%
ಹಿರಿಯ ನಾಗರಿಕರ ಉಳಿತಾಯ ಯೋಜನೆ- 8.2%
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ- 7.7%
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್)- 7.1%
ಕಿಸಾನ್ ವಿಕಾಸ್ ಪತ್ರ- 7.5%
ಸುಕನ್ಯಾ ಸಮೃದ್ಧಿ ಯೋಜನೆ- 8.2%
ಕೇಂದ್ರ ಸರ್ಕಾರವು ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೂ, ಷೇರು ಮಾರುಕಟ್ಟೆ ಏರಿಳಿತದ ಅವಧಿಯಲ್ಲಿ ಪೋಸ್ಟ್ ಆಫೀಸ್ ನಲ್ಲೇ ಹೂಡಿಕೆ ಮಾಡುವುದು ಸುರಕ್ಷಿತ ಎಂದು ಹೇಳಲಾಗುತ್ತಿದೆ. ನಿರೀಕ್ಷಿತ ಆದಾಯಕ್ಕೆ ಗ್ಯಾರಂಟಿ ಇರುವ ಕಾರಣ ಇವು ಸುರಕ್ಷಿತ ಹೂಡಿಕೆಯ ಯೋಜನೆಗಳು ಎಂದು ಪರಿಗಣಿಸಲಾಗಿದೆ.