ವಿಜಯಪುರ : ಧರ್ಮಸ್ಥಳ ನಿಗೂಢ ಹತ್ಯೆಗಳ ತನಿಖೆಗೆ ಎಸ್‌ಐಟಿ ರಚನೆ ಮಾಡಲಾಗಿದೆ. ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಪೊಲೀಸರಿಗೆ ಕೆಲಸ ಮಾಡುವುದಕ್ಕೆ ಬಿಡಿ. ಪ್ರಕರಣ ತನಿಖೆಯನ್ನು ರಾಜಕೀಯಕ್ಕೆ ಎಳೆದು ತರುವುದು ಬೇಡ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಡ್ವಾನ್ಸ್ ಜಡ್ಜ್‌ಮೆಂಟ್ ಬರೆಯುವ ಅವಶ್ಯಕತೆ ಇಲ್ಲ. ತನಿಖೆ ಮಾಡಲಿ, ಏನು ಸತ್ಯಾಂಶ ಹೊರಗೆ ಬರುತ್ತದೆ ಕಾದು ನೋಡೋಣ ಎಂದಿದ್ದಾರೆ.
ತನಿಖೆ ಮೂಲಕ ಸನಾತನ ಧರ್ಮದ ಮೇಲೆ ದಾಳಿಯಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಸಿದ ಸಚಿವರು, ಬಿಜೆಪಿಯವರು ಚುನಾವಣೆಯ ಸಂದರ್ಭದಲ್ಲಿ ಈ ರೀತಿ ಹಬ್ಬಿಸುವುದು ಸಾಮಾನ್ಯ ವಿಚಾರ. ಚುನಾವಣೆಗೆ 6 ತಿಂಗಳು ಇರುವಾಗಲೇ ಈ ರೀತಿ ಶುರು ಮಾಡುತ್ತಾರೆ. ಆದರೇ, ಈಗ ಚುನಾವಣೆಗೆ ಮೂರು ವರ್ಷ ಮುಂಚೆಯೇ ಶುರು ಮಾಡಿದ್ದಾರೆ ಎಂದು ಚಾಟಿ ಬೀಸಿದ್ದಾರೆ.
ಇದೇನು ಹೊಸದಲ್ಲ, ಹಿಂದೆ ಕರಾವಳಿಯಲ್ಲಿ ಹಿಂದೂಗಳ ಹತ್ಯೆ ಎಂದು ಆರೋಪ ಮಾಡಿದರು. ಸಿಬಿಐ, ಎಸ್‌ಐಟಿ ರಚನೆ ಮಾಡಿದರು. ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದರು.
ಸಿಎಂ-ಡಿಸಿಎಂ ನಡುವೆ ಮುಸುಕಿನ ಗುದ್ದಾಟ ಇನ್ನೂ ಇದೆ ಎಂಬ ವಿಚಾರಕ್ಕೆ ಸ್ಪಂದಿಸಿದ ಅವರು, ಅದು ಮುಗಿದ ಹೋದ ವಿಚಾರ. ಸ್ವತಃ ಸಿಎಂ ಅವರೇ ಹೇಳಿದ್ದಾರೆ. ಮುಸುಕಿನ ಗುದ್ದಾಟ ಪ್ರಶ್ನೆ ಇಲ್ಲ. ಕೆಪಿಸಿಸಿ ರಾಜ್ಯಾಧ್ಯಕ್ಷ ಬದಲಾವಣೆಯೂ ನಮ್ಮ ಹಂತದಲ್ಲಿ ಇಲ್ಲ. ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಸಮಯ ಬಂದಾಗ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುತ್ತಾರೆ.