ಉಡುಪಿ: ಏಕ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಲು ಸರ್ಕಾರ ಈಗಾಗಲೇ ಕೆಲವೊಂದು ವಿನಾಯಿತಿಗಳನ್ನು ಸೂಚಿಸಿ ಸುತ್ತೋಲೆ ಹೊರಡಿಸಿದೆ. ನಿಯಮಾನುಸಾರ ಅದನ್ನು ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚನೆ ನೀಡಿದ್ಧಾರೆ.
ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏಕ ವಿನ್ಯಾಸ ನಕ್ಷೆ ಹಾಗೂ ನಮೂನೆ 9/11 ರಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು.
ಕರಾವಳಿ ಪ್ರದೇಶಗಳ ಭೌಗೋಳಿಕ ಲಕ್ಷಣಗಳಿಂದಾಗಿ ಹಲವು ಸಂದರ್ಭಗಳಲ್ಲಿ ರಸ್ತೆಯನ್ನು ವಿಸ್ತರಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ವಿನ್ಯಾಸ ಅನುಮೋದನೆ ಸಮಯದಲ್ಲಿ ವಿನಾಯಿತಿ ನೀಡಲು ಅವಕಾಶ ನೀಡಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಅದರನ್ವಯ ನಿಯಮಾನುಸಾರ ಅನುಮೋದನೆಯನ್ನು ನೀಡಬೇಕು ಎಂದಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಮನೆ ಕಟ್ಟಲು ಏಕ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯಲು ನಗರ ಯೋಜನಾ ಪ್ರಾಧಿಕಾರದಲ್ಲಿ ಆಗುವುದಿಲ್ಲ ಎಂದು ಜನರ ಮನಸ್ಸಿನಲ್ಲಿ ಇದೆ. ಸಲ್ಲಿಕೆಯಾಗುವ ಅರ್ಜಿಗಳಲ್ಲಿ ಕಂಡು ಬರುವ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಪರಿಹಾರ ಕಂಡುಕೊಂಡು ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದಿದ್ದಾರೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಏಕ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯಲು ತೊಂದರೆಯಾಗುತ್ತಿದೆ ಎಂಬ ದೂರುಗಳು ಜನರಿಂದ ಕೇಳಿ ಬರುತ್ತಿವೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ನಗರ ಮತ್ತು ಗ್ರಾಮಾಂತರ ಇಲಾಖೆಯ ಸಹಾಯಕ ನಿರ್ದೇಶಕಿ ರಮ್ಯಾ ಭಾಗವಹಿಸಿದ್ದರು.