ಜೈಪುರ: ಪಾಪಿ ಪತಿಯೊಬ್ಬ ಬೈಕ್ ಗೆ ಪತ್ನಿಯನ್ನು ಕಟ್ಟಿ ಎಳೆದೊಯ್ದ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ.
ಮಹಿಳೆಯೊಬ್ಬರ ಕಾಲುಗಳನ್ನು ಮೋಟಾರು ಸೈಕಲ್ ಗೆ ಕಟ್ಟಿ ಎಳೆದೊಯ್ದ ಘಟನೆ ರಾಜಸ್ಥಾನದ (Rajasthan) ನಾಗೌರ್ ಜಿಲ್ಲೆಯಲ್ಲಿ ನಡೆದಿದೆ. ಆದರೆ, ಮಹಿಳೆಯು ಸಹಾಯಕ್ಕಾಗಿ ಕಿರುಚಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳೆಯನ್ನು ಕಲ್ಲು ಮಣ್ಣಿನ ಮೇಲೆ ದರದರನೆ ಎಳೆದಾದ ನಂತರ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಬೈಕ್ ನಿಂದ ಇಳಿದು ಗಾಯಗೊಂಡು, ನೋವಿನಿಂದ ಅರಚುತ್ತಿರುವ ಮಹಿಳೆಯತ್ತ ದರ್ಪದಿಂದ ನೋಡಿದ್ದಾನೆ. ಈ ಘಟನೆ ಕಳೆದ ತಿಂಗಳು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪತ್ನಿಗೆ ಈ ರೀತಿ ಅಮಾನವೀಯ ಹಿಂಸೆ ನೀಡುತ್ತಿರುವ ವಿಡಿಯೋವನ್ನು ಮತ್ತೋರ್ವ ವ್ಯಕ್ತಿ ವಿಡಿಯೋ ಮಾಡಿದ್ದಾರೆ. ಈ ಭಯಾನಕ ವಿಡಿಯೋ ಕಂಡು ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ದೇಶದಲ್ಲಿನ ಮಹಿಳೆಯರ ಭಯಾನಕ ದುಸ್ಥಿತಿ ಎಂದು ಹಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈ ಘಟನೆ ರಾಜಸ್ಥಾನದಲ್ಲಿ ನಡೆದಿದೆ ಎನ್ನಲಾಗಿದ್ದು, ಆರೋಪಿ ಮಾತ್ರ ಯಾರು ಎಂಬುವುದು ಇದುವರೆಗೆ ಗೊತ್ತಾಗಿಲ್ಲ. ಜೈಸಲ್ಮೇರ್ ನಲ್ಲಿನ ತನ್ನ ಸಹೋದರಿಯನ್ನು ಭೇಟಿಯಾಗಲು ಬಯಸಿದ್ದಕ್ಕಾಗಿ ಆ ವ್ಯಕ್ತಿ ಅವನ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ವರದಿಗಳು ಹೇಳಿವೆ. ಕೂಡಲೇ ಅಲ್ಲಿನ ಪೊಲೀಸರು ಎಚ್ಚೆತ್ತುಕೊಂಡು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಹಲವರು ಆಗ್ರಹಿಸುತ್ತಿದ್ದಾರೆ.