ಬೆಂಗಳೂರು: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಈಗ ರೈ ಹೇಳಿಕೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ಘಟನೆ ಬಗ್ಗೆ ವಿವರವಾಗಿ ಹೇಳಿಕೆ ದಾಖಲು ಮಾಡಿದ್ದಾರೆ. ಎಫ್ ಐಆರ್ ನಲ್ಲಿ ಉಲ್ಲೇಖಿಸಿರುವ ಆರೋಪಿಗಳಾದ ರಾಕೇಶ್ ಮಲ್ಲಿ, ಅನುರಾಧ ರೈ, ನಿತೀಶ್ ಶೆಟ್ಟಿ, ವೈದ್ಯನಾಥನ್ ಆರೋಪಿಗಳೇ ನನ್ನ ಮೇಲೆ ಅಟ್ಯಾಕ್ ಮಾಡಿಸಿದ್ದಾರೆ ಎಂದು ರಿಕ್ಕಿ ಹೇಳಿಕೆ ದಾಖಲೆ ಮಾಡಿದ್ದಾರೆ ಎನ್ನಲಾಗಿದೆ.
ಆಸ್ತಿ ವಿಚಾರವೇ ಗುಂಡಿನ ದಾಳಿಗೆ ಕಾರಣ. ನಾನು ರಷ್ಯಾದಲ್ಲಿದ್ದೆ. ಜಮೀನು ವಿವಾದ ಸಂಬಂಧ ಕೋರ್ಟ್ ನಲ್ಲಿ ಕೇಸ್ ಇತ್ತು. ಹೀಗಾಗಿ ಬೆಂಗಳೂರಿಗೆ ಬಂದಿದ್ದೆ. ನಾನು ಬೆಂಗಳೂರಿಗೆ ಸದಾಶಿವನಗರ, ಬಿಡದಿ ವಾಸವಿರುತ್ತಿದ್ದೆ. ಹನ್ನೆರಡು ಗಂಟೆಗೆ ಎರಡು ಕಾಲ್ ಬಂದಿದ್ದು, ಹೀಗಾಗಿ ಹೊರಟೆ. ಸದಾಶಿವನಗರ ಮನೆಗೆ ಹೋಗುವಾಗ ಮನೆಯಿಂದ ಹೊರಗಿನ ರಸ್ತೆಗೆ ಬಂದಾಗ ಅಟ್ಯಾಕ್ ಮಾಡಲಾಗಿದೆ. ಗುಂಡು ನನ್ನ ಕೈ ಹಾಗೂ ಮೂಗಿಗೆ ತಗುಲಿದೆ. ಆಗ ನನ್ನ ಸ್ನೇಹಿತರು ಹಾಗೂ ಡ್ರೈವರ್ ಆಸ್ಪತ್ರೆಗೆ ಸೇರಿಸಿದರು. ರಾಕೇಶ್ ಮಲ್ಲಿ ಹಾಗೂ ನನ್ನ ಚಿಕ್ಕಮ್ಮ ಅನುರಾಧರೇ ಅಟ್ಯಾಕ್ ಮಾಡಿಸಿದ್ದಾರೆ ಎಂದು ರಿಕ್ಕಿ ಪೊಲೀಸರ ಮುಂದೆ ಹೇಳಿದ್ದಾರೆ ಎನ್ನಲಾಗಿದೆ.