ಮಹಿಳಾ ಏಷ್ಯಾಕಪ್ 2024ರ 10 ನೇ ಪಂದ್ಯದಲ್ಲಿ ಭಾರತ ಹಾಗೂ ನೇಪಾಳ ತಂಡ ಸೆಣಸಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಭಾರತೀಯ ಆಟಗಾರ್ತಿ ಶಫಾಲಿ ವರ್ಮಾ ಆಟಕ್ಕೆ ನೇಪಾಳ ಬೆಚ್ಚಿ ಬಿದ್ದಿದೆ.
ಹಾಲಿ ಚಾಂಪಿಯನ್ ಟೀಂ ಇಂಡಿಯಾ, ನೇಪಾಳ ವಿರುದ್ಧ ತನ್ನ ಕೊನೆಯ ಗುಂಪು ಹಂತದ ಪಂದ್ಯ ಆಡುತ್ತಿದೆ. ಈ ಪಂದ್ಯದಲ್ಲಿ ಭಾರತ ತಂಡದ ಯುವ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಸಿಡಿಲಬ್ಬರದ ಆಟ ಪ್ರದರ್ಶಿಸಿವೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಆರಂಭದಿಂದಲೂ ಸ್ಫೋಟಕ ಆಟಕ್ಕೆ ಕೈ ಹಾಕಿದರು. 48 ಎಸೆತಗಳನ್ನು ಎದುರಿಸಿದ ಶಫಾಲಿ 81 ರನ್ ಗಳಿಸಿದರು. 12 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ್ದಾರೆ.
ಅಲ್ಲದೇ, ಆರಂಭಿಕರಾಗಿ ಕಣಕ್ಕಿಳಿದಿದ್ದ ದಯಾಳನ್ ಹೇಮಲತಾ ಕೂಡ 42 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 47 ರನ್ ಬಾರಿಸಿದರು. ಪಂದ್ಯದ ಕೊನೆಯಲ್ಲಿ ಸ್ಫೋಟಕ ಆಟವಾಡಿದ ಜೆಮಿಮಾ 15 ಎಸೆತಗಳಲ್ಲಿ 5 ಬೌಂಡರಿ ಸಹಿತ ಅಜೇಯ 28 ರನ್ ಗಳಿಸಿದರು. ಪರಿಣಾಮವಾಗಿ ಭಾರತ ತಂಡ 20 ಓವರ್ ಗಳಲ್ಲಿ 3 ವಿಕೆಟ್ ಗೆ 178 ರನ್ ಗಳಿಸಿತು.
ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಇಲ್ಲಿಯವರೆಗೆ ಇನ್ನಿಂಗ್ಸ್ ಆರಂಭಿಸುತ್ತಿದ್ದರು. ಆದರೆ, ಈ ಪಂದ್ಯದಲ್ಲಿ ಸ್ಮೃತಿ ಓಪನಿಂಗ್ ಮಾಡಲಿಲ್ಲ, ಅಷ್ಟೇ ಅಲ್ಲ ಬ್ಯಾಟಿಂಗ್ಗೆ ಕೂಡ ಇಳಿಯಲಿಲ್ಲ. ಈ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ಬದಲಿಗೆ ಸ್ಮೃತಿ ಮಂಧಾನ ತಂಡದ ನಾಯಕಿಯಾಗಿದ್ದಾರೆ.