ಹಾಸನ: ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಸರಣಿ ಸಾವುಗಳು ವರದಿಯಾಗುತ್ತಿದ್ದು, ಈ ವಿಷಯವಾಗಿ ಜಿಲ್ಲಾ ಅರೋಗ್ಯ ಅದಿಕಾರಿ ಡಾ. ಅನಿಲ್ ಮಾತನಾಡಿದ್ದಾರೆ.
ಎಲ್ಲಾ ಪ್ರಕರಣಗಳು ಹೃದಯಾಘಾತ ಅಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ. ಹಾಸನ ಜಿಲ್ಲೆಯ ಹೊರಗೆ ಮೃತಪಟ್ಟ ಪ್ರಕರಣಗಳಲ್ಲೂ ಹಾಸನ ಜಿಲ್ಲೆ ಎಂದು ಕೌಂಟ್ ಆಗುತ್ತಿದೆ. ಆದರೆ ಹಾಸನ ಜಿಲ್ಲೆಯಲ್ಲಿ ಆತಂಕಕಾರಿಯಾಗಿ ಸಾವಿನ ಸಂಖ್ಯೆ ಏರಿಕೆ ಆಗಿಲ್ಲ. ಅನಾರೋಗ್ಯದಿಂದ, ಹೃದಯ ಸಂಬಂಧಿ ಸಮಸ್ಯೆಯಿಂದಲೂ ಕೂಡ ಸಾವುಗಳು ಆಗಿವೆ. ಆದರೂ ಸಾವುಗಳು ಹೆಚ್ಚಾಗುತ್ತಿರುವ ಬಗ್ಗೆ ಗಮನ ಹರಿಸಲಾಗುತ್ತಿದೆ ಎಂದಿದ್ದಾರೆ.
ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಜನರಿಗೆ ಅರಿವು ಮೂಡಿಸಲು ಕ್ರಮ ತೆಗೆದುಕೊಂಡಿದ್ದೇವೆ. ಶಾಲೆ, ಕಾಲೇಜುಗಳಲ್ಲಿ ಯುವ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಆರೋಗ್ಯ ಸಮಸ್ಯೆ ಇರುವ ಜನರು ನಿಯಮಿತ ಅರೋಗ್ಯ ತಪಾಸಣೆ ಮಾಡಿಸಬೇಕು. ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಅನಾರೋಗ್ಯಕರ ಆಹಾರ ಪದ್ಧತಿಯಿಂದ ಯುವ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.