ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿ ಆಡಲು ಸಿದ್ಧವಾಗಿದೆ. ಈ ಮಧ್ಯೆ ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ಹಿಟ್ ಮ್ಯಾನ್ ಹೊಸ ದಾಖಲೆ ಬರೆಯುವ ಉತ್ಸಾಹದಲ್ಲಿದ್ದಾರೆ.
ಬರೋಬ್ಬರಿ 6 ತಿಂಗಳ ನಂತರ ಭಾರತ ತಂಡ ಟೆಸ್ಟ್ ಕ್ರಿಕೆಟ್ ಆಡುವುದಕ್ಕಾಗಿ ಬಿಳಿ ಜೆರ್ಸಿ ಧರಿಸುತ್ತಿದೆ. ಬಾಂಗ್ಲಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಸೆ. 19ರಿಂದ ಆರಂಭವಾಗಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಅದು ಬೇರೆ ಯಾರ ದಾಖಲೆಯೂ ಅಲ್ಲ, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ನಿರ್ಮಿಸಿದ್ದ ದಾಖಲೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಸೆಹ್ವಾಗ್, ಭಾರತೀಯ ತಂಡದ ಪರ ದಾಖಲೆ ಮಾಡಿದ್ದಾರೆ. ಟೀಂ ಇಂಡಿಯಾದ ಮಾಜಿ ಅನುಭವಿ ಆರಂಭಿಕ ಆಟಗಾರ ಸೆಹ್ವಾಗ್ ಆಡಿರುವ 104 ಟೆಸ್ಟ್ ಗಳಲ್ಲಿ ಒಟ್ಟು 91 ಸಿಕ್ಸರ್ ಗಳನ್ನು ಸಿಡಿಸಿ, ಭಾರತದ ಪರ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರನಾಗಿದ್ದಾರೆ.
ಎರಡನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಆಡಿರುವ 59 ಟೆಸ್ಟ್ ಪಂದ್ಯಗಳ 101 ಇನ್ನಿಂಗ್ಸ್ ಗಳಲ್ಲಿ 84 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. 9 ಸಿಕ್ಸರ್ ಗಳನ್ನು ರೋಹಿತ್ ಸಿಡಿಸಿದರೆ, ಸೆಹ್ವಾಗ್ ದಾಖಲೆಯನ್ನು ಮುರಿಯಬಹುದು. ಹೀಗಾಗಿ ರೋಹಿತ್ ಈ ದಾಖಲೆ ಮಾಡುತ್ತಾರಾ ಕಾಯ್ದು ನೋಡಬೇಕಿದೆ.
ರೋಹಿತ್ ಈಗಾಗಲೇ ಏಕದಿನ ಹಾಗೂ ಟಿ20ಯಲ್ಲಿ ಟೀಂ ಇಂಡಿಯಾ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಈಗ ಟೆಸ್ಟ್ ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆಯಿಸಿಕೊಳ್ಳುವ ತವಕದಲ್ಲಿ ರೋಹಿತ್ ಇದ್ದಾರೆ.
15 ವರ್ಷಗಳ ಹಿಂದೆ ವೀರೇಂದ್ರ ಸೆಹ್ವಾಗ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ 319 ರನ್ ಗಳ ಇನ್ನಿಂಗ್ಸ್ ಆಡುವ ಮೂಲಕ ಇತಿಹಾಸ ಬರೆದಿದ್ದರು. ಈಗ ಈ ದಾಖಲೆ ಮುರಿಯುವ ತವಕದಲ್ಲಿ ಹಿಟ್ ಮ್ಯಾನ್ ಇದ್ದಾರೆ. ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಸೇರಿದಂತೆ ಹಲವು ಆಟಗಾರರಿಗೆ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಿಸಿಕೊಳ್ಳುವ ಅವಕಾಶ ಸಾಕಷ್ಟಿದೆ.