ಹುಬ್ಬಳ್ಳಿ : ಬೆಂಗಳೂರು ನಡಿಗೆ ಕಾರ್ಯಕ್ರಮದ ಪ್ರಯುಕ್ತ ನಿನ್ನೆ ಲಾಲ್ಬಾಗ್ಗೆ ತೆರಳಿದ್ದ ಡಿಸಿಎಂ ಡಿಕೆ ಶಿವಕುಮಾರ್ ಇಂದು ಮತ್ತಿಕೆರೆಯ ಜೆಪಿ ಪಾರ್ಕ್ನಲ್ಲಿ ಜನರೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೆ ಭಾರೀ ಹೈಡ್ರಾಮಾ ನಡೆದಿದ್ದು, ಆರ್ಎಸ್ಎಸ್ ಡ್ರೆಸ್, ಟೋಪಿ ಧರಿಸಿ ಜೆಪಿ ಪಾರ್ಕ್ಗೆ ಬಂದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಡಿಕೆ ಶಿವಕುಮಾರ್ ನಿರ್ಲಕ್ಷ್ಯಿಸಿ ‘ಏಯ್ ಕರಿ ಟೋಪಿ MLA ಬಾರಯ್ಯ’ ಎಂದು ಕರೆದಿದ್ದಾರೆ.
ಸದ್ಯ ಈ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಡಿಕೆಶಿ ವಿರುದ್ದ ವಿರೋಧ ಪಕ್ಷದ ನಾಯಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಬಗ್ಗೆ ಇದೀಗ ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಡಿಕೆ ಶಿವಕುಮಾರ್ ವಿರುದ್ದ ಕೆಂಡಾಮಂಡಲವಾಗಿದ್ದಾರೆ.
ಡಿಕೆಶಿಗೆ ಧೈರ್ಯ ಇದ್ದರೆ ಸಾಬ್ರು ಹಾಕುವ ಟೋಪಿಗೆ ಜಾಲರಿ ಟೋಪಿ ಎನ್ನಲಿ. ಅವರವರ ಸ್ಟ್ಯಾಂಡರ್ಡ್ ಗೆ ತಕ್ಕಂತೆ ಮಾತನಾಡುತ್ತಾರೆ. ಅದೇ ಮುಸ್ಲಿಂ ವ್ಯಕ್ತಿ ಟೋಪಿ ಹಾಕಿಕೊಂಡು ಬಂದಾಗ ಅವರನ್ನು ಕರೆಯಲಿ ನೋಡೋಣ, ಹಿಂದೂಗಳಿಗೆ ಒಂದು ಮುಸ್ಲಿಂರಿಗೆ ಒಂದು ರೀತಿ ನೋಡ್ತಾರೆ. ಶಾಸಕರ ಮೇಲೆ ಹಲ್ಲೆ ಯತ್ನ ನಡೆದಿದ್ದರೆ ಅದು ಖಂಡನೀಯ, ಮೈಗೆ ಸೊಕ್ಕ ಬಹಳ ಬಂದಿದೆ. ಜನರೇ ಅವರ ಸೊಕ್ಕು ಇಳಿಸುತ್ತಾರೆ ಎಂದು ಡಿಕೆಶಿ ವಿರುದ್ದ ಜೋಶಿ ಕಿಡಿಕಾರಿದ್ದಾರೆ.