ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (SBI Recruitment 2025) ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂಬ ಕನಸು ತುಂಬ ಜನರದ್ದಾಗಿರುತ್ತದೆ. ಆದರೆ, ಈ ಕನಸು ನನಸು ಮಾಡಿಕೊಳ್ಳಲು ಈಗ ಒಳ್ಳೆಯ ಅವಕಾಶ ಬಂದಿದೆ. ಹೌದು, ಎಸ್ ಬಿಐನಲ್ಲಿ 541 ಹುದ್ದೆಗಳು ಖಾಲಿ ಇದ್ದು, ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಜುಲೈ 14 ಕೊನೆಯ ದಿನವಾಗಿದೆ.
ಎಸ್ ಬಿಐ ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭ ಆಗಿದ್ದು, ಜುಲೈ 14 ಕೊನೆಯ ದಿನವಾಗಿದೆ. ಆಸಕ್ತರು sbi.co.inಗೆ ಭೇಟಿ ನೀಡುವ ಮೂಲಕ ಅಥವಾ ನೇರವಾಗಿ ನೋಂದಣಿ ಪೋರ್ಟಲ್ ibpsonline.ibps.in/sbipomay25ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. 500 ನಿಯಮಿತ ವರ್ಗದ ಹುದ್ದೆಗಳು ಹಾಗೂ 41 ಬ್ಯಾಕ್ ಲಾಗ್ ಹುದ್ದೆಗಳಾಗಿವೆ ಎಂದು ಬ್ಯಾಂಕ್ ತಿಳಿಸಿದೆ.
ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪದವಿ ಪಡೆದಿರಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದವರೆಗೆ ಅಭ್ಯರ್ಥಿಯ ವಯಸ್ಸು 21ರಿಂದ 30 ವರ್ಷಗಳ ಒಳಗೆ ಇರಬೇಕು. ಮೀಸಲಾತಿಯಲ್ಲಿ ಸಡಿಲಿಕೆ ಇದ್ದು, ಎಸ್ ಸಿ, ಎಸ್ ಟಿ, ಒಬಿಸಿ ವರ್ಗಗಳ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಜನರಲ್ ಹಾಗೂ ಒಬಿಸಿ ವರ್ಗದವರಿಗೆ 750 ರೂ. ಅರ್ಜಿ ಶುಲ್ಕವಿದೆ. ಎಸ್ ಸಿ, ಎಸ್ ಟಿ ವರ್ಗದವರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಆನ್ ಲೈನ್ ಮೂಲಕವೇ ಶುಲ್ಕ ಪಾವತಿಸಬೇಕಾಗುತ್ತದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ಸಂಬಳ ನಿಗದಿ ಮಾಡಲಾಗಿದೆ.