ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಆರೆಸ್ಸೆಸ್ ವಿರುದ್ಧ ಗುಡುಗಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮೈಸೂರು ದಸರಾ ಉನ್ನತ ಮಟ್ಟದ ಸಮಿತಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಎಂದಿದ್ದಾರೆ.
ಆರೆಸ್ಸೆಸ್ ನ ದತ್ತಾತ್ರೇಯ ಹೊಸಬಾಳೆ ಅವರು ‘ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆಯಬೇಕು’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆರೆಸ್ಸೆಸ್ ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟುಕೊಂಡಿರುವವರು. ಸಂವಿಧಾನ ಬದಲಾವಣೆಯಾಗಬೇಕು ಹಾಗೂ ಮನುಸ್ಮೃತಿ ಜಾರಿಯಾಗಬೇಕೆಂಬ ಮನಸ್ಥಿತಿ ಇರುವವರು. ಅದನ್ನು ಬಿಟ್ಟು ಅವರಿಗೆ ಇನ್ನೇನು ಹೇಳಲು ಸಾಧ್ಯ. ಸಂವಿಧಾನ ಶಾಸನ ಸಭೆಯಲ್ಲಿ ಚರ್ಚೆಯಾಗಿ ರಚನೆಯಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇದರ ಅಧ್ಯಕ್ಷರಾಗಿ ಸಂವಿಧಾನ ರಚಿಸಿದ್ದಾರೆ. ಜಾತ್ಯಾತೀತ ಮತ್ತು ಸಮಾಜವಾದ ಎಂಬ ಪದಗಳನ್ನು ನಂತರ ಸೇರಿಸಲಾಗಿದೆ ಎಂದಿದ್ದಾರೆ. ಸಂಸತ್ತಿನಲ್ಲಿ ಇದು ಚರ್ಚೆಯಾಗಿ ಸoವಿಧಾನ ತಿದ್ದುಪಡಿ ಮಾಡಲಾಗಿದೆ. ಸಂವಿಧಾನ ದತ್ತಾತ್ರೇಯ ಹೊಸಬಾಳೆ ಅವರು ಹೇಳಿದಂತೆ ರಚನೆಯಾಗಿಲ್ಲ ಎಂದರು.
ಹುಲಿಗಳ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮ
ಹುಲಿಗಳ ಸಾವಿನ ಬಗ್ಗೆ ಉತ್ತರಿಸಿದ ಅವರು, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡು ಕೆಲವರನ್ನು ಬಂಧಿಸಲಾಗಿದೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.