ಬೆಂಗಳೂರು: ದೇಶದ ಯಾವುದೇ ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಸಿಹಿ ಸುದ್ದಿ ನೀಡಿದೆ. ಹೌದು, ಬ್ಯಾಂಕ್ ಗಳಲ್ಲಿ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ (BSBD Accounts) ಖಾತೆ ಹೊಂದಿರುವ ಗ್ರಾಹಕರಿಗೆ ಕಡ್ಡಾಯವಾಗಿ ಹಲವು ಉಚಿತ ಸೇವೆಗಳನ್ನು ನೀಡಬೇಕು ಎಂದು ಆರ್ ಬಿ ಐ ತಿಳಿಸಿದೆ. ಇದರಿಂದಾಗಿ ಕೋಟ್ಯಂತರ ಗ್ರಾಹಕರಿಗೆ ಅನುಕೂಲವಾಗಲಿದೆ.
ಹೌದು, ಬ್ಯಾಂಕುಗಳಲ್ಲಿ ಪ್ರಧಾನಮಂತ್ರಿ ಜನಧನ ಯೋಜನೆ ಅನ್ವಯ ತೆರೆಯಲಾದ ಖಾತೆಗಳೆಲ್ಲ BSBD ಖಾತೆಗಳಿವೆ. ಈ ಖಾತೆಗಳಿಗೆ ಇನ್ನು ಬ್ಯಾಂಕುಗಳು ಮೊಬೈಲ್ ಬ್ಯಾಂಕಿಂಗ್ ಹಾಗೂ ಇಂಟರ್ ನೆಟ್ ಬ್ಯಾಂಕಿಂಗ್ ಸೇವೆಗಳನ್ನು ಉಚಿತವಾಗಿ ಪಡೆಯಲು ಅವಕಾಶ ನೀಡಬೇಕು ಎಂದು ಬ್ಯಾಂಕ್ ಗಳಿಗೆ ಆರ್ ಬಿ ಐ ಮಹತ್ವದ ಸೂಚನೆ ನೀಡಿದೆ.
ದೇಶದ ಆರ್ಥಿಕತೆಯಲ್ಲಿ, ಆರ್ಥಿಕತೆಯ ಡಿಜಿಟಲೀಕರಣದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತಾಗಬೇಕು. ಹಾಗಾಗಬೇಕು ಎಂದರೆ, ಬಿ ಎಸ್ ಬಿ ಡಿ ಖಾತೆ ಹೊಂದಿದವರಿಗೆ ಸರಿಯಾದ ಸೌಲಭ್ಯಗಳು ಸಿಗಬೇಕು. ಅದರಲ್ಲೂ, ಇಂಟರ್ ನೆಟ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಉಚಿತವಾಗಿ ನೀಡಬೇಕು ಎಂದು ಆರ್ ಬಿ ಐ ತಿಳಿಸಿದೆ.
ದೇಶದಲ್ಲಿ 56.6 ಕೋಟಿ ಬಿ ಎಸ್ ಬಿ ಡಿ ಖಾತೆಗಳಿವೆ. ಈ ಖಾತೆಗಳಲ್ಲಿ ಸುಮಾರು 2.67 ಲಕ್ಷ ಕೋಟಿ ರೂ. ಜಮೆ ಇದೆ. ದೇಶದ ಯಾವುದೇ ಬ್ಯಾಂಕ್ ಗಳಲ್ಲಿ ಕೂಡ ಜನ ಬಿ ಎಸ್ ಬಿ ಡಿ ಖಾತೆಗಳನ್ನು ತೆರೆಯಬಹುದಾಗಿದೆ. ಇಂತಹ ಖಾತೆಗಳಿಗೆ ಈಗಾಗಲೇ ಶೂನ್ಯ ಠೇವಣಿಗೆ ಯಾವುದೇ ಶುಲ್ಕಗಳನ್ನು ವಿಧಿಸುವಂತಿಲ್ಲ. ಇದರ ಬೆನ್ನಲ್ಲೇ, ಮತ್ತಷ್ಟು ಸೇವೆಗಳನ್ನು ಉಚಿತವಾಗಿ ನೀಡಲು ಆರ್ ಬಿ ಐ ಮುಂದಾಗಿದೆ.