ಕಿರುತೆರೆ ನಟ ಮಡೆನೂರು ಮನು ವಿರುದ್ದ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಪೊಲೀಸರು ನಿನ್ನೆ ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಇಡೀ ರಾತ್ರಿ ವಿಚಾರಣೆ ನಡೆಸಿದ್ದಾರೆ. ಸಂತ್ರಸ್ತೆ ಆರೋಪದಂತೆ ಖಾಸಗಿ ವೀಡಿಯೋ ಬಗ್ಗೆ ತನಿಖೆ ನಡೆಸಿದ್ದಾರೆ. ಡ್ರಿಂಕ್ಸ್ ಮಾಡಿಸಿ ಪ್ರಜ್ಞೆ ತಪ್ಪಿಸಿ ಖಾಸಗಿ ವೀಡಿಯೋ ಮಾಡಿರುವ ಆರೋಪ ಮನು ವಿರುದ್ಧ ಕೇಳಿ ಬಂದಿದೆ.
ಹೀಗಾಗಿ ಪೊಲೀಸರು ಇಡೀ ಮೊಬೈಲ್ ಪರಿಶೀಲನೆ ಮಾಡಿದ್ದಾರೆ. ಆದರೆ, ಮೊಬೈಲ್ ನಲ್ಲಿ ಯಾವುದೇ ಖಾಸಗಿ ವಿಡಿಯೋ ಪತ್ತೆಯಾಗಿಲ್ಲ. ಆದರೆ, ಇಬ್ಬರೂ ಜೊತೆಯಲ್ಲಿರುವ ಕೆಲವು ಫೋಟೋಗಳು ಪತ್ತೆಯಾಗಿವೆ ಎನ್ನಲಾಗಿದೆ. ರಿಯಾಲಿಟಿ ಶೋ ಸೆಟ್ ನಲ್ಲಿ ತೆಗೆಸಿಕೊಂಡಿರುವ ಫೋಟೋಗಳು ಸಿಕ್ಕಿವೆ. ಆದರೆ ಅಶ್ಲೀಲವಾದಂತಹ, ಇಬ್ಬರು ಖಾಸಗಿ ಆಗಿ ಇರುವ ಯಾವುದೇ ಫೋಟೋ ಹಾಗೂ ವಿಡಿಯೋಗಳು ಪತ್ತೆಯಾಗಿಲ್ಲ. ಹೀಗಾಗಿ ಪೊಲೀಸರು ಸಂತ್ರಸ್ತೆಗೆ ಮತ್ತೆ ನೋಟಿಸ್ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಖಾಸಗಿ ವೀಡಿಯೋ ಇರುವುದು ಹೇಗೆ ಗೊತ್ತಾಯ್ತು? ನಿಮಗೆ ಆ ವೀಡಿಯೋ ಯಾವಾಗದರೂ ನೋಡಿಸಿದರಾ? ಯಾವ ವೀಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದರು? ಆರೋಪಗಳಿಗೆ ಪೂರಕವಾದ ಸಾಕ್ಷ್ಯಗಳನ್ನು ನೀಡುವಂತೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆಂದು ತಿಳಿದು ಬಂದಿದೆ.