ಹುಬ್ಬಳ್ಳಿ: ನಗರದಲ್ಲಿ ಐದು ವರ್ಷದ ಬಾಲಕಿಯ ಮೇಲೆ ಕಾಮುಕನೊಬ್ಬ ಪೈಶಾಚಿಕ ಕೃತ್ಯ ನಡೆಸಿ ಹತ್ಯೆ ಮಾಡಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ಈಗ ಆರೋಪಿ ಗುಂಡಿಗೆ ಬಲಿಯಾಗಿದ್ದು, ಕಮಿಷನರ್ ಗೆ ಜನ ಜೈಕಾರ ಹಾಕುತ್ತಿದ್ದಾರೆ.
ಕಾಮುಕ ಗುಂಡಿಗೆ ಬಲಿಯಾಗಿದ್ದಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ಅವರಿಗೆ ಜನರು ಜೈಕಾರ ಹಾಕಿದ್ದಾರೆ. ಆರೋಪಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ಸೇರಿದ್ದ ಜನ ಚಪ್ಪಾಳೆ ತಟ್ಟಿ, ಜೈಕಾರ ಹಾಕಿದರು.ಆಗ ಕಮಿಷನರ್ ಜನರನ್ನು ಚದುರಿಸಿದ್ದಾರೆ.
ಇಂದು ಮಧ್ಯಾಹ್ನದ ವೇಳೆಗೆ ಈ ಘಟನೆ ನಡೆದಿತ್ತು. ಆರೋಪಿ ಚಾಕೋಲೇಟ್ ಆಸೆ ತೋರಿಸಿ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದ ಎನ್ನಲಾಗಿದೆ. ಆರೋಪಿಯನ್ನು ಬಿಹಾರ ಮೂಲದವನು ಎನ್ನಲಾಗಿದೆ. ಆತ ನಗರದ ಹೊರ ವಲಯದಲ್ಲಿ ಅಡಗಿ ಕುಳಿತಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸರು ಅರೆಸ್ಟ್ ಮಾಡಲು ಮುಂದಾಗಿದ್ದರು. ಈ ವೇಳೆ ಪೊಲೀಸರ ಮೇಲೆ ಕಲ್ಲು ತೂರಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಪೊಲೀಸರು ವಿಧಿಯಿಲ್ಲದೆ, ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದಾರೆ. ಆ ಗುಂಡು ಆತನ ಎದೆಗೆ ತಗುಲಿ ಸಾವನ್ನಪ್ಪಿದ್ದಾನೆ. ಕಾಮುಕ ಸಾವನ್ನಪ್ಪಿದ್ದಕ್ಕೆ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.