ನವದೆಹಲಿ: ಲೋಕಸಭೆ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಅವರು ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧದ ಮತ ಕಳ್ಳತನ(ವೋಟ್ ಚೋರಿ) ಆರೋಪವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಮಹದೇವಪುರ ಕ್ಷೇತ್ರದ ಬಳಿಕ ಈಗ ಕರ್ನಾಟಕದ ಆಳಂದ ಕ್ಷೇತ್ರವನ್ನು ಪ್ರಮುಖ ಉದಾಹರಣೆಯಾಗಿ ಮುಂದಿಟ್ಟು ಮತದಾರರ ಪಟ್ಟಿಯಿಂದ ವ್ಯವಸ್ಥಿತವಾಗಿ ಹೆಸರುಗಳನ್ನು ಅಳಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಸಾಫ್ಟ್‌ವೇರ್ ದುರ್ಬಳಕೆ ಮತ್ತು ನಕಲಿ ಅರ್ಜಿಗಳ ಮೂಲಕ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಪವರ್‌ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ಅವರು ತಮ್ಮ ಆರೋಪಕ್ಕೆ ಪೂರಕವಾದ ಸಾಕ್ಷ್ಯಗಳ ವಿವರಗಳನ್ನು ನೀಡಿದ್ದಾರೆ.
ಆಳಂದ ಕ್ಷೇತ್ರದ ಉದಾಹರಣೆ
“ಕರ್ನಾಟಕದ ವಿಧಾನಸಭಾ ಕ್ಷೇತ್ರವಾದ ಆಳಂದದಲ್ಲಿ ಬರೋಬ್ಬರಿ 6,018 ಮತಗಳನ್ನು ಅಳಿಸಲು ಪ್ರಯತ್ನಿಸಲಾಗಿದೆ,” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. “2023ರ ಚುನಾವಣೆಯಲ್ಲಿ ಆಳಂದದಲ್ಲಿ ಒಟ್ಟು ಎಷ್ಟು ಮತಗಳನ್ನು ಅಳಿಸಲಾಗಿದೆ ಎಂಬುದು ನಮಗೆ ತಿಳಿದಿಲ್ಲ. ಆದರೆ 6,018 ಮತಗಳನ್ನು ಅಳಿಸುವಾಗ ಯಾರೋ ಆಕಸ್ಮಿಕವಾಗಿ ಸಿಕ್ಕಿಬಿದ್ದಿದ್ದಾರೆ,” ಎಂದು ಅವರು ಹೇಳಿದ್ದಾರೆ.
ಒಬ್ಬ ಬೂತ್ ಮಟ್ಟದ ಅಧಿಕಾರಿಯ ಚಿಕ್ಕಪ್ಪನ ಹೆಸರು ಮತದಾರರ ಪಟ್ಟಿಯಿಂದ ಕಣ್ಮರೆಯಾದಾಗ ಈ ಅಕ್ರಮ ಬೆಳಕಿಗೆ ಬಂದಿದೆ. “ತನ್ನ ಚಿಕ್ಕಪ್ಪನ ಮತವನ್ನು ಯಾರು ಅಳಿಸಿದರು ಎಂದು ಅವರು ಪರಿಶೀಲಿಸಿದಾಗ, ಅದು ಅವರ ನೆರೆಮನೆಯವರು ಎಂದು ತಿಳಿದುಬಂದಿದೆ. ಆದರೆ ನೆರೆಮನೆಯವರನ್ನು ಕೇಳಿದಾಗ, ತಾವು ಯಾವುದೇ ಮತವನ್ನು ಅಳಿಸಿಲ್ಲ ಎಂದು ಅವರು ಹೇಳಿದ್ದಾರೆ. ಅಂದರೆ, ಮತವನ್ನು ಅಳಿಸಿದವರಿಗೂ ಗೊತ್ತಿಲ್ಲ, ಯಾರ ಮತ ಅಳಿಸಲ್ಪಟ್ಟಿದೆಯೋ ಅವರಿಗೂ ಗೊತ್ತಿಲ್ಲ. ಬೇರಾವುದೋ ಶಕ್ತಿ ಈ ಪ್ರಕ್ರಿಯೆಯನ್ನು ಹೈಜಾಕ್ ಮಾಡಿ ಮತವನ್ನು ಅಳಿಸಿದೆ,” ಎಂದು ರಾಹುಲ್ ವಿವರಿಸಿದ್ದಾರೆ.
ಚುನಾವಣಾ ಆಯೋಗದ ಮೇಲೆ ನೇರ ಆರೋಪ
ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು “ಮತಗಳ್ಳರನ್ನು” ರಕ್ಷಿಸುತ್ತಿದ್ದಾರೆ ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. “ನಾನಿದನ್ನು ಲಘುವಾಗಿ ಹೇಳುತ್ತಿಲ್ಲ, ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ಹೇಳುತ್ತಿದ್ದೇನೆ. ಭಾರತದ ಮುಖ್ಯ ಚುನಾವಣಾ ಆಯುಕ್ತರು ಮತಗಳ್ಳರನ್ನು ರಕ್ಷಿಸುತ್ತಿದ್ದಾರೆ. ಇದು ಸ್ಪಷ್ಟವಾದ ಪುರಾವೆ, ಇದರಲ್ಲಿ ಯಾವುದೇ ಗೊಂದಲವಿಲ್ಲ,” ಎಂದು ಅವರು ಹೇಳಿದರು.
ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಅವರು, ತಾವು ಶೀಘ್ರದಲ್ಲೇ ಮತ ಕಳ್ಳತನದ ಬಗ್ಗೆ ನಿರಾಕರಿಸಲಾಗದ ಪುರಾವೆಗಳ “ಹೈಡ್ರೋಜನ್ ಬಾಂಬ್” ಸಿಡಿಸುವುದಾಗಿ ಘೋಷಿಸಿದ್ದರು. ಆದರೆ, ಇಂದಿನ ಪತ್ರಿಕಾಗೋಷ್ಠಿ ಆ ‘ಹೈಡ್ರೋಜನ್-ಬಾಂಬ್’ ಅಲ್ಲ, ಅದು ಶೀಘ್ರದಲ್ಲೇ ಬರಲಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.