ಬೆಂಗಳೂರು: ದೇಶದ ಅಂಚೆ ಕಚೇರಿಗಳು ಈಗ ಕೇವಲ ಅಂಚೆಯಣ್ಣನಿಗೆ ಸೀಮಿತವಾಗಿಲ್ಲ. ಅಂಚೆ ಕಚೇರಿಗಳು ಡಿಜಿಟಲ್ ಆಗುತ್ತಿವೆ. ಅಂಚೆ ಕಚೇರಿಯಲ್ಲಿ ಪತ್ರ ವ್ಯವಹಾರದ ಜತೆಗೆ ಬ್ಯಾಂಕಿಂಗ್, ಉಳಿತಾಯ, ಹೂಡಿಕೆಯನ್ನೂ ಮಾಡಬಹುದಾಗಿದೆ. ಇಷ್ಟೆಲ್ಲ ಬದಲಾವಣೆಗೆ ಕಾರಣವಾಗಿರುವ ಅಂಚೆ ಕಚೇರಿಗಳಲ್ಲಿ ಇನ್ನು ಡಿಜಿಟಲ್ ಪೇಮೆಂಟ್ ಕೂಡ ನಡೆಯಲಿದೆ. ಆಗಸ್ಟ್ ತಿಂಗಳಿನಿಂದಲೇ ಹೊಸ ಪೇಮೆಂಟ್ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ.
ಹೌದು, ಆಗಸ್ಟ್ ತಿಂಗಳಿಂದ ಅಂಚೆ ಕಚೇರಿಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ಬರಲಿದೆ. ಯುಪಿಎಐ, ಕ್ಯೂಆರ್ ಕೋಡ್ ಮೂಲಕ ಅಂಚೆ ಇಲಾಖೆಯ ಯಾವುದೇ ಸೇವೆಗಳನ್ನು ಪಡೆಯಲು ಪೇಮೆಂಟ್ ಮಾಡಬಹುದಾಗಿದೆ. ಇದರಿಂದ ಗ್ರಾಹಕರಿಗೆ ನಗದು ಇಟ್ಟುಕೊಂಡು ಹೋಗುವ ಸಮಸ್ಯೆ ಇರುವುದಿಲ್ಲ.

ಕರ್ನಾಟಕದಲ್ಲೂ ಜಾರಿ
ಅಂಚೆ ಇಲಾಖೆಯ ಕರ್ನಾಟಕ ಸರ್ಕಲ್ನಲ್ಲಿ ಅದರ ಹೊಸ ಐಟಿ ಇನ್ ಫ್ರಾಸ್ಟ್ರಕ್ಚರ್ ಅನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಮೈಸೂರು ಮುಖ್ಯ ಅಂಚೆ ಕಚೇರಿ, ಬಾಗಲಕೋಟೆ ಮುಖ್ಯ ಕಚೇರಿ ಹಾಗೂ ಅವುಗಳ ಅಡಿಯಲ್ಲಿ ಬರುವ ಅಂಚೆ ಕಚೇರಿಗಳಲ್ಲಿ ಕ್ಯುಆರ್ ಕೋಡ್ ಆಧಾರಿತವಾಗಿ ಮೇಲ್ ಮತ್ತು ಪಾರ್ಸಲ್ ಬುಕಿಂಗ್ ಸರ್ವಿಸ್ ಅನ್ನು ನಡೆಸಲಾಗುತ್ತಿದೆ.
ಮೊದಲಿಗೆ ಅಂಚೆ ಕಚೇರಿಗಳ ಪಿಒಎಸ್ ಕೌಂಟರ್ಗಳಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ಸಾಧ್ಯವಾಗುವಂತೆ ಸ್ಟಾಟಿಕ್ ಕ್ಯುಆರ್ ಕೋಡ್ ಅನ್ನು ಅಳವಡಿಸಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆ ಮತ್ತು ಗ್ರಾಹಕರಿಗೆ ಅನನುಕೂಲ ಆಗಿದ್ದರಿಂದ ಈ ವಿಧಾನವನ್ನು ಕೈಬಿಟ್ಟು ಈಗ ಹೊಸ ವ್ಯವಸ್ಥೆ ತರಲಾಗಿದೆ.
ದೇಶಾದ್ಯಂತ ಒಂದೂವರೆ ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳಿದ್ದು ಎಲ್ಲ ಕಡೆಗೂ ಹೊಸ ಐಟಿ ಇನ್ಫ್ರಾಸ್ಟ್ರಕ್ಚರ್ ಅಳವಡಿಸಲಾಗುತ್ತಿದೆ. ಸ್ಪೀಡ್ ಪೋಸ್ಟ್, ರಿಜಿಸ್ಟರ್ಡ್ ಪೋಸ್ಟ್, ಪಾರ್ಸಲ್ ಇತ್ಯಾದಿ ಮೇಲ್ ಪ್ರಾಡಕ್ಟ್ಗಳನ್ನು ಕಳುಹಿಸುವುದು ಬಹಳ ಸುಲಭವಾಗುತ್ತದೆ. ಪೋಸ್ಟ್ ಆಫೀಸ್ ಸ್ಮಾಲ್ ಸೇವಿಂಗ್ ಸ್ಕೀಮ್ಗಳಿಗೂ ಕೂಡ ಯುಪಿಐ ಮೂಲಕ ಹಣ ಪಾವತಿಸಲು ಅವಕಾಶ ನೀಡಲಾಗುತ್ತದೆ.