ಬೆಂಗಳೂರು: ಕೇಂದ್ರ ಸರ್ಕಾರವು ಜಿಎಸ್ ಟಿ ಸ್ಲ್ಯಾಬ್ ಗಳನ್ನು ಕಡಿತ ಮಾಡಿರುವ ಕಾರಣ ದೇಶದ ಜನತೆಗೆ ದಸರಾ ಉಡುಗೊರೆ ಸಿಕ್ಕಂತಾಗಿದೆ. ಅದರಲ್ಲೂ, ಹೆಲ್ತ್ ಹಾಗೂ ಲೈಫ್ ಇನ್ಶೂರೆನ್ಸ್ ಮೇಲಿನ ಶೇ.18ರ ಜಿಎಸ್ ಟಿಯನ್ನು ಶೂನ್ಯಕ್ಕೆ ಇಳಿಸಲಾಗಿದೆ. ಇದರಿಂದಾಗಿ ಇನ್ಶೂರೆನ್ಸ ಪ್ರೀಮಿಯಂ ಮೇಲಿನ ಜಿಎಸ್ ಟಿ ಉಳಿಯಲಿದೆ. ಆದರೆ, ಈಗಾಗಲೇ ಇನ್ಶೂರೆನ್ಸ್ ಪ್ರೀಮಿಯಂ ಕಟ್ಟುವ ಕೊನೆಯ ದಿನಾಂಕ ಮುಗಿದಿದ್ದರೆ, ನೀವು ಸೆ.22ರ ನಂತರ ಪ್ರೀಮಿಯಂ ಕಟ್ಟಿ ಹಣ ಉಳಿಸಬೇಕು ಎಂದಿದ್ದರೆ ಕೂಡಲೇ ಪ್ಲಾನ್ ಚೇಂಜ್ ಮಾಡುವುದೇ ಒಳಿತು.
ಹೌದು, ವಿಮಾ ಪ್ರೀಮಿಯಂ ವಿಳಂಬ ಮಾಡಲು ಉದ್ದೇಶಿಸಿರುವವರಿಗೆ ಇನ್ಶೂರೆನ್ಸ್ ರೆಗ್ಯೂಲೇಟರಿ ಆ್ಯಂಡ್ ಡೆವಲಪ್ ಮೆಂಟ್ ಅಥಾರಿಟಿ (ಐಆರ್ ಡಿ ಎಐ) ಮಹತ್ವದ ಸೂಚನೆ ನೀಡಿದೆ. ಸೆಪ್ಟೆಂಬರ್ 22ರ ನಂತರ ವಿಮಾ ಪ್ರೀಮಿಯಂ ಡ್ಯೂ ಇದ್ದವರಿಗೆ ಮಾತ್ರ ಜಿಎಸ್ ಟಿ ವಿನಾಯಿತಿ ಸಿಗಲಿದೆ. ಈಗಾಗಲೇ ಡ್ಯೂ ಇರುವವರು ಜಿಎಸ್ ಟಿ ಸಮೇತ ಪಾವತಿ ಮಾಡಬೇಕು ಎಂದು ಸೂಚಿಸಿದೆ. ಹಾಗಾಗಿ, ವಿಳಂಬ ನೀತಿ ಅನುಸರಿಸುವವರಿಗೆ ಯಾವುದೇ ಲಾಭವಾಗುವುದಿಲ್ಲ.
ಸರ್ಕಾರದ ನೂತನ ಜಿಎಸ್ ಟಿ ದರಗಳು ಸೆಪ್ಟೆಂಬರ್ 22ರಿಂದ ಜಾರಿಗೆ ಬರುತ್ತವೆ. ಸೆಪ್ಟೆಂಬರ್ 21ರವರೆಗೂ ನೀವು ಪಾವತಿಸುವ ಇನ್ಷೂರೆನ್ಸ್ ಪ್ರೀಮಿಯಮ್ ಮೇಲೆ ಶೇ. 18 ಜಿಎಸ್ಟಿ ಅನ್ವಯ ಆಗುತ್ತದೆ. ಇನ್ಷೂರೆನ್ಸ್ ಪ್ರೀಮಿಯಮ್ ಕಟ್ಟಲು ಒಂದು ಗಡುವು ನಿಗದಿ ಮಾಡಲಾಗಿರುತ್ತದೆ. ಅದಾದ ಬಳಿಕ ಕೆಲ ದಿನಗಳಷ್ಟು ಗ್ರೇಸ್ ಪೀರಿಯಡ್ ಇರುತ್ತದೆ. ವಾಹನ ಇನ್ಷೂರೆನ್ಸ್ ಪಾಲಿಸಿಗಳಿಗೆ ಗ್ರೇಸ್ ಪೀರಿಯಡ್ ಇರೋದಿಲ್ಲ. ಅವು ತತ್ ಕ್ಷಣವೇ ಲ್ಯಾಪ್ಸ್ ಆಗುತ್ತದೆ ಎಂಬುದೂ ಗಮನದಲ್ಲಿರಲಿ.
ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳಿಗೆ ಗ್ರೇಸ್ ಪೀರಿಯಡ್ ಸಾಮಾನ್ಯವಾಗಿ 15 ದಿನ ಮಾತ್ರವೇ ಇರುತ್ತದೆ. ಲೈಫ್ ಇನ್ಷೂರೆನ್ಸ್ ಆದರೆ 15ರಿಂದ 30 ದಿನಗಳವರೆಗೂ ಇರಬಹುದು. ನಿಮ್ಮ ಇನ್ಷೂರೆನ್ಸ್ ಪಾಲಿಸಿಯ ಡಾಕ್ಯುಮೆಂಟ್ನಲ್ಲಿ ಗ್ರೇಸ್ ಪೀರಿಯಡ್ ಎಷ್ಟಿದೆ ಎಂಬುದನ್ನು ಗಮನಿಸಿ. ನಿಮ್ಮ ಹೆಲ್ತ್ ಮತ್ತು ಲೈಫ್ ಇನ್ಷೂರೆನ್ಸ್ ಪ್ರೀಮಿಯಮ್ಗೆ ಡ್ಯೂ ಡೇಟ್ ಮೀರಿ ಗ್ರೇಸ್ ಪೀರಿಯಡ್ ಕೂಡ ಗತಿಸಿ ಹೋದಾಗ, ಪಾಲಿಸಿ ನಿಷ್ಕ್ರಿಯಗೊಳ್ಳುತ್ತದೆ. ಲೈಫ್ ಇನ್ಷೂರೆನ್ಸ್ ಆದರೆ ರಿವೈವಲ್ ಫೀ, ಬಡ್ಡಿ ತೆರಬೇಕಾಗುತ್ತದೆ. ಹೊಸದಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಬೇಕಾಗಬಹುದು. ಹಾಗಾಗಿ, ಕೂಡಲೇ ಪ್ರೀಮಿಯಂ ಕಟ್ಟುವುದು ಒಳಿತು ಎನ್ನಲಾಗುತ್ತಿದೆ.